ಜಿಲ್ಲೆ

ಬಾಳೆಗಿಡ ನೆಟ್ಟು ಕೈ ಕಾರ್ಯಕರ್ತರ ಆಕ್ರೋಶ

ವೀರೇಶ ಸೌದ್ರಿ

ಶಿರಸಿ: ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯ ನಗರದ ನೀಲೇಕಣಿ ಭಾಗದಲ್ಲಿ ಹೊಂಡಮಯವಾದ ರಸ್ತೆಯನ್ನು ತಕ್ಷಣವೇ ಸರಿಪಡಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ತಾಸಿಗೂ ಅಧಿಕ ಕಾಲ ವಾಹನ ಸಂಚಾರ ತಡೆ ನಡೆಸಿದರು. ರಸ್ತೆಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ ನಡೆಸಿದರು.

ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಜಗದೀಶ ಗೌಡ ಮಾತನಾಡಿ, ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಯಡಿ ಕಳೆದ ನಾಲ್ಕು ವರ್ಷಗಳಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಮುಕ್ತಾಯವಾಗಿಲ್ಲ. ಕಾಮಗಾರಿ ವೇಗವಾಗಿ ಮುಗಿಸಬೇಕು ಎಂಬ ಉದ್ದೇಶದಿಂದ ಜಿಲ್ಲಾಡಳಿತ ಹೆದ್ದಾರಿಯಲ್ಲಿ ದೊಡ್ಡ ವಾಹನಗಳ ಸಂಚಾರ ನಿಷೇಧಿಸಿದೆ. ಈ ನಿಷೇಧವನ್ನು ಇನ್ನೂ ಮೂರು ತಿಂಗಳು ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಲೇಕಣಿ ರಸ್ತೆಯು ತೀರಾ ಹದಗೆಟ್ಟಿದೆ. ಗುತ್ತೆಗೆದಾರ ಆರ್‌ಎನ್‌ಎಸ್ ಕಂಪನಿ ಹೊಂಡ ಮುಚ್ಚುವ ಕಾರ್ಯ ಮಾಡಲಿಲ್ಲ. ಆರ್ ಎನ್‌ಎಸ್ ಹಾಗೂ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಸ್ಥಳಕ್ಕೆ ಆಗಮಿಸಿದ ಆರ್‌ಎನ್‌ಎಸ್ ಕಂಪನಿ ಗುತ್ತಿಗೆದಾರರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ನೀರಿನ ಪೈಪ್‌ಲೈನ್ ಕಾಮಗಾರಿ ಹಾಗೂ ವಿದ್ಯುತ್ ಕಂಬ ಸ್ಥಳಾಂತರದ ನಿಮಿತ್ತ ಕಾಮಗಾರಿ ವಿಳಂಬವಾಗಿದೆ. ಈಗಾಗಲೇ ವಿದ್ಯುತ್ ಕಂಬ ಸ್ಥಳಾಂತರವಾಗಿದೆ. ನೀರಿನ ಪೈಪ್‌ಲೈನ್ ಕಾಮಗಾರಿ ನಡೆಸಬೇಕು. ಹಾಗಾಗಿ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಗುತ್ತಿಗೆದಾರರು ತಿಳಿಸಿದರು.

ಇನ್ನೊಂದು ವಾರದೊಳಗೆ ರಸ್ತೆ ಕಾಮಗಾರಿ ಆರಂಭಿಸಬೇಕು. ಸಾಧ್ಯವಾಗದಿದ್ದಲ್ಲಿ ತಕ್ಷಣವೇ ಇಲ್ಲಿ ಡಾಂಬರೀಕರಣ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇನ್ನೊಂದು ವಾರದೊಳಗೆ ಡಾಂಬರೀಕರಣ ಮಾಡುವುದಾಗಿ ಆರ್‌ಎನ್‌ಎಸ್ ಕಂಪನಿ ಗುತ್ತಿಗೆದಾರ ಭರವಸೆ ನೀಡಿದರು.

ಕಾಂಗ್ರೆಸ್ ಮುಖಂಡರಾದ ದೀಪಕ್ ದೊಡ್ಡೂರ, ಶ್ರೀನಿವಾಸ ನಾಯ್ಕ, ಪ್ರಸನ್ನ ಶೆಟ್ಟಿ, ಎಸ್. ಕೆ. ಭಾಗ್ವತ್ ಇತರರಿದ್ದರು.

ಕಾಗೇರಿಗೆ ಡಬಲ್ ರೋಡ್...

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಊರಿಗೆ ಡಬಲ್ ರಸ್ತೆ ನಿರ್ಮಿಸಲಾಗಿದೆ. ಹೆಚ್ಚಿನ ಜನ ಓಡಾಡುವ ರಸ್ತೆ ಶಿರಸಿ-ಕುಮಟಾ ರಸ್ತೆಗೆ ಸಾಮಾನ್ಯ ನಿರ್ವಹಣೆ ಸಹ ಮಾಡಿಲ್ಲ. ನೀಲೇಕಣಿ ಬಳಿ ಬೃಹತ್ ಹೊಂಡಗಳು ಬಿದ್ದಿವೆ. ರಸ್ತೆಯಿಂದ ಧೂಳು ಹಾರುತ್ತದೆ ಎಂಬ ಕಾರಣಕ್ಕೆ ಗುತ್ತಿಗೆದಾರರು ಪ್ರತಿ ದಿನ ನೀರು ಹಾಕುತ್ತಿದ್ದಾರೆ. ಇದರಿಂದಾಗಿ ಈ ಹೊಂಡಗಳ ಆಳ ಅರಿವಾಗದೇ ಬೈಕ್ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ರಸ್ತೆಯ ಅಕ್ಕ ಪಕ್ಕದ ಮನೆಯವರು ಕಳೆದ ಎರಡು ವರ್ಷಗಳಿಂದ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.