ಜಿಲ್ಲೆ

ಕ್ವಾರಿಯಲ್ಲಿ ಕೃಷಿ ಖುಷಿ

ಉಳ್ಳಾಲ: ಯಾರಿಗೂ ಬೇಡ ಎಂಬಂತಿದ್ದ ಕಪ್ಪು ಕಲ್ಲು ಕ್ವಾರಿ ಪಕ್ಕ ಐದು ತಿಂಗಳ ಹಿಂದೆ ಮಾಡಿದ ಸಾಹಸಕ್ಕೆ ಫಲ ಸಿಕ್ಕಿದೆ. ಜಮೀನು ಈಗ ಬಾಳೆಗೊನೆಗಳಿಂದ ನಳನಳಿಸುತ್ತಿದೆ.

ಕೃಷಿಕರಾಗಿರುವ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಐದು ತಿಂಗಳ ಹಿಂದೆ ಬೋಳಿಯಾರ್‌ನಲ್ಲಿರುವ ಕಪ್ಪು ಕಲ್ಲು ಕ್ವಾರಿ ಬಳಿ ಬಾಳೆ ಗಿಡ ನೆಟ್ಟಿದ್ದರು. ಕಪ್ಪು ಕಲ್ಲು ಕ್ವಾರಿ ಎಂದರೆ ಕಲ್ಲಿನ ಹುಡಿಯಿಂದ ಗಿಡಗಳು ಬೆಳೆಯುವುದಿಲ್ಲ ಎಂಬ ಭಾವನೆ ಹೆಚ್ಚಿನವರಲ್ಲಿತ್ತು. ಅದನ್ನು ಹೋಗಲಾಡಿಸಲು ಮುಂದಾದ ರೈ, ಬ್ರಹ್ಮಾವರದಿಂದ ತಲಾ 35 ರೂ.ನಂತೆ 500ಕ್ಕೂ ಅಧಿಕ ಟಿಶ್ಯೂ ಕಲ್ಚರ್ ಬಾಳೆಗಿಡಗಳನ್ನು ತಂದು ನಾಟಿ ಮಾಡಿದ್ದರು. ಜತೆಗೆ ಅಡಕೆ, ತರಕಾರಿ ಗಿಡಗಳನ್ನೂ ನೆಟ್ಟಿದ್ದರು.

ಸದ್ಯ ನಿರೀಕ್ಷೆಗೂ ಮೀರಿ ಬೆಳವಣಿಗೆ ಕಂಡಿರುವ ಬಾಳೆ ಗಿಡಗಳಲ್ಲಿ ಬೃಹತ್ ಗಾತ್ರದ ಗೊನೆಗಳಾಗಿವೆ. ಒಂದೊಂದು ಗೊನೆಯೂ ಗರಿಷ್ಠ 33 ಕೆಜಿ ತೂಗುತ್ತಿದೆ.

ಕಪ್ಪು ಕಲ್ಲಿನ ಕ್ವಾರಿಯಿಂದ ಜಮೀನಿಗೆ ಬೆಲೆ ಇಲ್ಲ, ಕೃಷಿ ಆಗುವುದಿಲ್ಲ ಎನ್ನುವ ಭಾವನೆ ಹೋಗಲಾಡಿಸಲು ಬಾಳೆಗಿಡ ಮತ್ತು ಅಡಕೆ ಗಿಡಗಳನ್ನು ನೆಟ್ಟಿದ್ದೆ, ಇದೀಗ ಬಾಳೆಗಿಡ ಫಲ ನೀಡಿದೆ. ಅಡಕೆ ಗಿಡಗಳೂ ನಿರೀಕ್ಷೆಗೂ ಮೀರಿ ಬೆಳವಣಿಗೆ ಕಾಣುತ್ತಿದೆ.

ಸಂತೋಷ್ ಕುಮಾರ್ ರೈ, ಕೃಷಿಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ