ಜಿಲ್ಲೆ

ಬಣಜಿಗ ಸಮಾಜದ ಸಮಾವೇಶ 14ರಂದು

ಸವಣೂರ: ಸಮಾಜ ಬಾಂಧವರ ಸಹಕಾರದಿಂದ ತಾಲೂಕಿನಲ್ಲಿ ಉತ್ತಮ ಸಂಘಟನೆಯೊಂದಿಗೆ ಜು. 14ರಂದು ದ್ವಿತೀಯ ಸಮಾವೇಶದೊಂದಿಗೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಬಣಜಿಗ ಸಮಾಜದ ಅಧ್ಯಕ್ಷ ಚನ್ನಬಸಪ್ಪ ಅಂಗಡಿ ತಿಳಿಸಿದರು.

ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಭೆಯಲ್ಲಿ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ‘ನಿತ್ಯ ಒತ್ತಡದ ಮಧ್ಯೆ ಜೀವನ ಸಾಗಿಸುವ ಪ್ರತಿಯೊಬ್ಬರಿಗೂ ಸಮಾಜದ ಒಡನಾಟ ಅವಶ್ಯವಾಗಿದೆ. ಆದ್ದರಿಂದ, ಸರ್ವರೂ ಸಾಮಾಜಿಕ ಚಿಂತನೆಯೊಂದಿಗೆ ಸಮಾರಂಭದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು’ ಎಂದು ಕೋರಿದರು.

ಉಪಾಧ್ಯಕ್ಷ ಮಂಜುನಾಥ ಶೆಟ್ಟರ ಮಾತನಾಡಿ, ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಹಾಗೂ ತಾಲೂಕು ಸಂಘದ ವತಿಯಿಂದ ಜು. 14ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ಶ್ರೀ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಬಣಜಿಗ ಸಮಾಜದ ದ್ವಿತೀಯ ಸಮಾವೇಶ, ನೂತನ ಸಂಸದರಿಗೆ ಅಭಿನಂದನಾ ಸಮಾರಂಭ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದರು.

ಹಾಸನ ಜಿಲ್ಲೆ ಅರಕಲಗೂಡು ತಾಲೂಕು ಬಸವಪಟ್ಟಣದ ಶ್ರೀ ತೋಂಟದಾರ್ಯ ಸಂಸ್ಥಾನಮಠದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಸಮಾವೇಶ ಉದ್ಘಾಟಿಸಿ, ಸನ್ಮಾನ ಸ್ವೀಕರಿಸುವರು. ಉಪ ಸಭಾಪತಿ ರುದ್ರಪ್ಪ ಲಮಾಣಿ ಘನ ಉಪಸ್ಥಿತಿ ವಹಿಸುವರು. ತಾಲೂಕು ಬಣಜಿಗ ಸಮಾಜದ ಅಧ್ಯಕ್ಷ ಚನ್ನಬಸಪ್ಪ ಅಂಗಡಿ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ, ಸಂಸದರಾದ ಬಿ.ವೈ. ರಾಘವೇಂದ್ರ, ಸಾಗರ ಖಂಡ್ರೆ, ಮಾಜಿ ಸಂಸದ ಶಿವಕುಮಾರ ಉದಾಸಿ, ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ ಅವರನ್ನು ಸನ್ಮಾನಿಸಲಾಗುವುದು. ಕಸಾಪ ಧಾರವಾಡ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಚಂದ್ರಪ್ಪ ಬಾರಂಗಿ ವಿಶೇಷ ಉಪನ್ಯಾಸ ನೀಡುವರು. ಹೊಳಲಿನ ಸುಭಾಸಚಂದ್ರ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ ಜರುಗುವುದು ಎಂದು ವಿವರಿಸಿದರು.

ಉಪಾಧ್ಯಕ್ಷ ಗುರು ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸವಣೂರ ತಾಲೂಕು ಬಣಜಿಗ ಸಮಾಜ ಸಂಘಟನೆ ಹಾಗೂ ಸಮಾವೇಶ ಆಯೋಜನೆಯಲ್ಲಿ ರಾಜ್ಯಕ್ಕೆ ಮಾದರಿಯಾಗಲಿದೆ. ವಿವಿಧ ಜಿಲ್ಲೆಗಳಿಂದ ಸಮಾಜ ಬಾಂಧವರು ಆಗಮಿಸುತ್ತಾರೆ. ಸರ್ವರೂ ಆಗಮಿಸಿ ಸಮಾರಂಭವನ್ನು ಯಶಸ್ವಿಗೊಳಿಸಬೇಕು ಎಂದರು.

ಪದಾಧಿಕಾರಿಗಳಾದ ಶೇಖಪ್ಪ ಶೀಲವಂತರ, ಶಾಂತಪ್ಪ ಪಂಚಪ್ಪನವರ, ಶೇಖರ ಅಂಗಡಿ, ಗಣೇಶ ಬೆಳ್ಳಟ್ಟಿ, ಬಸವರಾಜ ಮೆಣಸಿನಕಾಯಿ, ಬಸವರಾಜ ಹಾಲಗಿ, ಮಹಾಂತೇಶ ಹಾವಣಗಿ, ಜಗದೀಶ ದೇಟಿನ ಇತರರಿದ್ದರು. ಮಾಧ್ಯಮ ಸಂಯೋಜಕರಾದ ಮಂಜುನಾಥ ಬೆಣ್ಣಿ ಹಾಗೂ ಶಿವಕುಮಾರ ತೆಗ್ಗಿಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.