ಜಿಲ್ಲೆ

ಬಿಜೆಪಿ ಅಭಿವೃದ್ಧಿ ಕಾರ್ಯಗಳಿಂದ ಕಾಂಗ್ರೆಸ್‌ಗೆ ನಿರಾಸೆ : ಸಚಿವ ಸುಧಾಕರ್ ವ್ಯಂಗ್ಯ

Bengaluru Rural

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ


ಬಿಜೆಪಿ ಎಂದಿಗೂ ಜಾತಿ, ಧರ್ಮಾಧಾರಿತ ರಾಜಕಾರಣ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ ಅಥವಾ ಅದರ ಆಧಾರಿತವಾಗಿ ಯೋಜನೆ ರೂಪಿಸಿಲ್ಲ. ಆದರೆ ಕಾಂಗ್ರೆಸ್ ನಾಯಕರು 60 ವರ್ಷಗಳಿಂದ ಓಲೈಕೆ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮದ ಸಿದ್ಧತೆಗಳನ್ನು ಮಂಗಳವಾರ ವೀಕ್ಷಿಸಿ ಮಾತನಾಡಿದರು. ಬಿಜೆಪಿಯ ಅಭಿವೃದ್ಧಿ ಕಾರ್ಯಗಳಿಂದ ಕಾಂಗ್ರೆಸ್‌ನವರು ನಿರಾಶರಾಗಿದ್ದಾರೆ. ಮುಂದಿನ ದಿನಗಳಲ್ಲಿ ಬಹುಮತದಿಂದ ಗೆದ್ದು ಆಡಳಿತ ನಡೆಸುವ ಹಗಲು ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.


ಕೆಂಪೇಗೌಡರ ಪ್ರತಿಮೆ ಉದ್ಘಾಟನೆ, ವಿಮಾನ ನಿಲ್ದಾಣದ ಟರ್ಮಿನಲ್-2, ವಂದೇ ಭಾರತ್ ರೈಲಿಗೆ ಚಾಲನೆ ಸೇರಿ ಹಲವು ಕಾರ್ಯಕ್ರಮಗಳಲ್ಲಿ ನ.11ರಂದು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಸರ್ವರ ಜತೆ ಎಲ್ಲರೂ ಸೇರಿ, ಸರ್ವರ ಕಲ್ಯಾಣ ಎಂಬುದು ಪ್ರಧಾನಿಗಳ ಮಂತ್ರ. ಬಿಜೆಪಿ ಎಂದಿಗೂ ಸಮುದಾಯ, ಜಾತಿ, ಧರ್ಮದ ಆಧಾರಿತವಾಗಿ ಯೋಜನೆಗಳನ್ನು ರೂಪಿಸಲು ಮುಂದಾಗುವುದಿಲ್ಲ. ಕಾಂಗ್ರೆಸ್ 60 ವರ್ಷದ ಆಡಳಿತದ ಸಾಧನೆ ಶೂನ್ಯ. ಜಾತಿಗಳನ್ನು ಓಲೈಸಿ ಮತಗಳನ್ನು ಸೆಳೆಯುವುದೇ ಅವರ ತಂತ್ರ. ಜನ ಈಗ ಪ್ರಬುದ್ಧರಾಗಿದ್ದಾರೆ. ಯಾವುದು ಸುಳ್ಳು, ಯಾವುದು ಸತ್ಯ ಎಂಬುದು ಅರ್ಥವಾಗಿದೆ ಎಂದರು.


ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ನೀಡಿರುವ ಮೀಸಲಾತಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಇಂತಹ ಕಾರ್ಯಕ್ರಮ ತರಲು ಬಿಜೆಪಿಗೆ ಮಾತ್ರ ಸಾಧ್ಯವಾಗುತ್ತದೆ. ಕಾಂಗ್ರೆಸ್ ಅಥವಾ ಜೆಡಿಎಸ್‌ಗೆ ಇದರ ಆಲೋಚನೆಯೂ ಬರಲು ಸಾಧ್ಯವಿಲ್ಲ ಎಂದರು.
ಕೆಂಪೇಗೌಡರು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದರೂ, ಅವರು ಸರ್ವಧರ್ಮ ನಾಯಕರು. ಆದರೆ ಒಕ್ಕಲಿಗ ಸಮುದಾಯಕ್ಕೆ ಕಾಂಗ್ರೆಸ್‌ನವರು ಏನೂ ಮಾಡಿಲ್ಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸೇರಿ ಹಿರಿಯ ಒಕ್ಕಲಿಗ ನಾಯಕರನ್ನು ಕಾಂಗ್ರೆಸ್ ಅವಮಾನಿಸಿದೆ ಎಂದರು.


ಕಾಂಗ್ರೆಸ್‌ನವರ ರಾಜಕೀಯ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬಾರದು. ಬಿಜೆಪಿ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಬರುವ ಕಾಂಗ್ರೆಸ್‌ನವರಿಗೂ ಸ್ವಾಗತ ನೀಡುತ್ತೇವೆ ಎಂದು ನಾವು ಹೇಳುತ್ತೇವೆ. ಬಿಜೆಪಿಗೆ ಇನ್ನಷ್ಟು ನಾಯಕರು ಸೇರ್ಪಡೆಯಾಗುತ್ತಾರೆಯೇ ಹೊರತು, ಮೈನಸ್ ಆಗುವುದಿಲ್ಲ. ಹಿರಿಯ ಐಎಎಸ್ ಅಧಿಕಾರಿ, ಇಬ್ಬರು ಮಾಜಿ ಸಂಸದರು, ಕೋಲಾರ ಜಿಲ್ಲೆಯ ಇಬ್ಬರು ಮಾಜಿ ಶಾಸಕರು, ಚಿಕ್ಕಬಳ್ಳಾಪುರದಲ್ಲಿ ಒಬ್ಬ ಮಾಜಿ ಶಾಸಕರು ಬಿಜೆಪಿಗೆ ಬಂದಿದ್ದಾರೆ ಎಂದರು.


ಜಾರಕಿಹೊಳಿ ಇತಿಹಾಸದ ಅರಿವು ಮೂಡಿಸಿಕೊಳ್ಳಲಿ:
ಸತೀಶ್ ಜಾರಕಿಹೊಳಿ ಇತಿಹಾಸದ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಪ್ರದರ್ಶಿಸಿದ್ದಾರೆ. ಹಿಂದು ಪದ, ಹಿಂದುತ್ವದ ಬಗೆಗೆ, ದೇಶದ ಇತಿಹಾಸವನ್ನು ಅವರು ಪರಿಚಯ ಮಾಡಿಕೊಂಡು, ಅರಿವು ಮೂಡಿಸಿಕೊಳ್ಳುವ ಕೆಲಸ ಮಾಡಬೇಕಾಗುತ್ತದೆ. ವಿಶ್ವದಲ್ಲಿಯೇ ಹಿಂದು ಧರ್ಮಕ್ಕೆ ವಿಶೇಷ ಗೌರವವಿದೆ. ಸನಾತನ ಹಿಂದು ಧರ್ಮ ಒಂದು ಜೀವನಶೈಲಿ. ಇದು ಅತಿ ಉನ್ನತ ಆದರ್ಶವಾಗಿದೆ ಎಂದರು.