ಜಿಲ್ಲೆ

ಈ ಬಾರಿ ಪಿಒಪಿ ಗಣೇಶ ಮೂರ್ತಿಗೆ ನಿಷೇಧ ?

Haveri - Desk - Ganapati Bhat

ವಿಕ್ರಮ ನಾಡಿಗೇರ ಧಾರವಾಡ

ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಈ ಸಮಯದಲ್ಲಿಯೇ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಗಣೇಶ ಮೂರ್ತಿಗಳ ಮಾರಾಟ ನಿಷೇಧಿಸಲಾಗುತ್ತದೆ ಎಂಬ ಮಾತುಗಳು ಅಧಿಕಾರಿಗಳಿಂದ ಕೇಳಿಬರುತ್ತಿವೆ. ಆದರೆ, ಪ್ರತಿ ವರ್ಷ ಪಿಒಪಿ ಮೂರ್ತಿಗಳ ಮಾರಾಟ ಮಾತ್ರ ಸದ್ದಿಲ್ಲದೆ ನಡೆಯುತ್ತಿದೆ.

ಹಬ್ಬದ ಒಂದು ತಿಂಗಳ ಪೂರ್ವ ಜಿಲ್ಲಾಡಳಿತ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಪಿಒಪಿ ಮೂರ್ತಿ ಜಿಲ್ಲೆ ಪ್ರವೇಶಿಸದಂತೆ ಹಾಗೂ ಮಾರಾಟ ಮಾಡದಂತೆ ಕ್ರಮವಾಗಬೇಕು. ಒಂದು ವೇಳೆ ಮಾರಾಟ ಮಾಡುತ್ತಿದ್ದರೆ ಸೀಜ್ ಮಾಡುವಂತೆ ಸೂಚಿಸುತ್ತದೆ. ಆದರೆ, ಈ ಸೂಚನೆ ಸಭೆಗೆ ಮಾತ್ರ ಸೀಮಿತ ಎಂಬಂತಾಗಿದೆ. ಇದೀಗ ಮತ್ತೆ ಅದೇ ರಾಗ ಶುರುವಾಗಿದೆ. ಇಷ್ಟೆಲ್ಲ ಮಾಡಿದರೂ ಸಂಪೂರ್ಣ ನಿಷೇಧ ಮಾಡಲು ಅಧಿಕಾರಿಗಳು ಮುಂದಾಗುವರೇ ಎಂಬ ಪ್ರಶ್ನೆ ಉದ್ಭವವಾಗಿದೆ.

ಕೆಲ ದಿನಗಳ ಹಿಂದಷ್ಟೇ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಸದಸ್ಯರು ಸೇರಿ ಎಲ್ಲ ಹಂತದವರೊಂದಿಗೆ ಸಭೆ ನಡೆಸಲಾಗಿದೆ. ಪಿಒಪಿ ಮೂರ್ತಿ ತಯಾರಿಸದೆ ಮಣ್ಣಿನ ಮೂರ್ತಿಗಳನ್ನೇ ತಯಾರಿಸಬೇಕು. ಹೊರ ರಾಜ್ಯ, ಜಿಲ್ಲೆಗಳಿಂದ ಸಹ ಪಿಒಪಿ ಮೂರ್ತಿಗಳು ಜಿಲ್ಲೆ ಪ್ರವೇಶಿಸದಂತೆ ತಡೆಯಲು ಸೂಚಿಸಲಾಗಿದೆ.

ಆದರೆ, ಅವಳಿನಗರದ ಕೆಲ ಕಡೆಗಳಲ್ಲಿ ಪಿಒಪಿ ಮೂರ್ತಿಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇನ್ನೊಂದೆಡೆ ಹೊರ ರಾಜ್ಯದಿಂದ ಪಿಒಪಿ ಮೂರ್ತಿಗಳು ಜಿಲ್ಲೆ ಪ್ರವೇಶಕ್ಕೆ ಸಿದ್ಧವಾಗಿವೆ. ಇವುಗಳನ್ನು ತಡೆಯುವಂತೆ ಪರಿಸರ ಅಧಿಕಾರಿಗಳು ಸತತವಾಗಿ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ, ಅನುಷ್ಠಾನಕ್ಕೆ ಬಂದಿದ್ದು ಅಲ್ಪ ಮಾತ್ರ. ಹೀಗಾಗಿ ಈ ಬಾರಿಯಾದರೂ ಪಿಒಪಿ ಸಂಪೂರ್ಣ ನಿಷೇಧ ಮಾಡಿ ಮಣ್ಣಿನ ವಿಗ್ರಹಗಳಿಗೆ ಆದ್ಯತೆ ನೀಡಬೇಕು ಎಂಬ ಕೂಗು ಕೇಳಿ ಬಂದಿದೆ.

ಏಕೆ ನಿಷೇಧ?

ಪಿಒಪಿ ಮೂರ್ತಿಗಳನ್ನು ಕೆರೆ, ಬಾವಿ ಸೇರಿ ಇತರ ಜಲ ಮೂಲಗಳಲ್ಲಿ ವಿಸರ್ಜಿಸಿದರೆ ನೀರು ಹಾಳಾಗುತ್ತದೆ. ಅಲ್ಲದೆ, ಪರಿಸರವೂ ನಾಶವಾಗುತ್ತದೆ. ಹೀಗಾಗಿ ಮಣ್ಣಿನ ಮೂರ್ತಿಗಳಿಗೆ ಮಾತ್ರ ಅವಕಾಶ ನೀಡಬೇಕು ಎಂಬುದು ಪರಿಸರವಾದಿಗಳ ವಾದ. ಇಷ್ಟೆಲ್ಲ ವಿರೋಧದ ನಡುವೆಯೂ ಪಿಒಪಿ ಮೂರ್ತಿಗಳ ನಿಷೇಧಕ್ಕೆ ಜಿಲ್ಲಾಡಳಿತ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಏನೆಲ್ಲ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಜನರ ಸಹಕಾರವೂ ಮುಖ್ಯ

ಪಿಒಪಿ ಮೂರ್ತಿಗಳ ನಿಷೇಧಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂಬುದು ಸರಿ. ಆದರೆ, ಇದಕ್ಕೆ ಜನರ ಸಹಕಾರವೂ ಅತ್ಯಂತ ಮುಖ್ಯ. ನಾವು ಪಿಒಪಿ ಮೂರ್ತಿ ಬಿಟ್ಟು ಮಣ್ಣಿನ ಮೂರ್ತಿ ಮಾತ್ರ ಪ್ರತಿಷ್ಠಾಪಿಸುತ್ತೇವೆ ಎಂದು ನಿರ್ಧರಿಸಬೇಕು. ಅಂದಾಗ ಪಿಒಪಿ ಮೂರ್ತಿಗಳು ತನ್ನಷ್ಟಕ್ಕೆ ತಾನೇ ನಿಷೇಧವಾಗುತ್ತದೆ. ಇಂತಹ ಮೂರ್ತಿಗಳ ಮಾರಾಟಗಾರರು, ತಯಾರಕರೂ ಮಣ್ಣಿನ ಮೂರ್ತಿಗಳ ತಯಾರಿಕೆಗೆ ಮುಂದಾಗುತ್ತಾರೆ. ಇಂತಹ ನಿರ್ಧಾರವನ್ನು ಜನರು ಈ ವರ್ಷವೇ ಮಾಡಿದರೆ, ಮುಂದಿನ ವರ್ಷಕ್ಕಾದರೂ ಪಿಒಪಿ ಪೂರ್ಣ ನಿಷೇಧ ಆಗಬಹುದು.

ಪಿಒಪಿ ಮೂರ್ತಿಗಳ ಸಂಪೂರ್ಣ ನಿಷೇಧಕ್ಕೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಯತ್ನಿಸುತ್ತಿದೆ. ಕೆಲ ದಿನಳ ಹಿಂದಷ್ಟೇ ಸ್ಥಳೀಯ ಸಂಸ್ಥೆಗಳ ಸಭೆ ನಡೆಸಿ, ಬೇರೆ ಜಿಲ್ಲೆಗಳಿಂದ ಪಿಒಪಿ ಮೂರ್ತಿಗಳು ಜಿಲ್ಲೆ ಪ್ರವೇಶಿಸದಂತೆ ಹಾಗೂ ನಗರದಲ್ಲಿ ತಯಾರಿ, ಮಾರಾಟ ಮಾಡುವುದು ಕಂಡು ಬಂದಲ್ಲಿ ಮೂರ್ತಿಗಳನ್ನು ವಶಕ್ಕೆ ಪಡೆಯುವಂತೆ ಸೂಚಿಸಲಾಗಿದೆ. | ಜಗದೀಶ ಐ.ಎಚ್., ಪ್ರಾದೇಶಿಕ ಅಧಿಕಾರಿ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ