ಜಮಖಂಡಿ ತಹಸೀಲ್ದಾರ್ ಸಭಾಭವನದಲ್ಲಿ ನಡೆದ ಸ್ವಾತಂತ್ರೃ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿದರು. 
ಜಿಲ್ಲೆ

ಪ್ಲಾಸ್ಟಿಕ್ ಧ್ವಜ ಬಳಕೆ, ಮಾರಾಟಕ್ಕೆ ಕಡಿವಾಣ ಹಾಕಿ

ಜಮಖಂಡಿ: ಸ್ವಾತಂತ್ರೃ ದಿನಾಚರಣೆ ವೇಳೆ ಪ್ಲಾಸ್ಟಿಕ್ ಧ್ವಜಗಳನ್ನು ಬಳಸದಂತೆ ಹಾಗೂ ಮಾರಾಟ ಮಾಡದಂತೆ ಕಂದಾಯ, ಪೊಲೀಸ್, ನಗರಸಭೆ ಅಧಿಕಾರಿಗಳು ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಎಸಿ ಶ್ವೇತಾ ಬೀಡಿಕರ ಹೇಳಿದರು.

ನಗರದ ತಹಸೀಲ್ದಾರ್ ಸಭಾಭವನದಲ್ಲಿ ನಡೆದ ಸ್ವಾತಂತ್ರೃ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಕ್ರೀಡಾಂಗಣವನ್ನು ನಗರಸಭೆಯವರು ಸ್ವಚ್ಛಗೊಳಿಸಬೇಕು. ನಗರದಲ್ಲಿರುವ ಪುತ್ಥಳಿಗಳನ್ನು ಸ್ವಚ್ಛಗೊಳಿಸಿ ಅವುಗಳನ್ನು ವಿದ್ಯುತ್ ದೀಪ ಗಳಿಂದ ಅಲಂಕರಿಸಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಆರೋಗ್ಯ, ನಗರಸಭೆ, ಪೊಲೀಸ್, ಅಗ್ನಿಶಾಮಕ ದಳ ಅಧಿಕಾರಿಗಳು ಜಾಗ್ರತೆ ವಹಿಸಬೇಕು ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ತಾಲೂಕಾಡಳಿತದಿಂದ ಸನ್ಮಾನಿಸಲು ಬಿಇಒ ಅಧ್ಯಕ್ಷತೆಯಲ್ಲಿನ ಆಯ್ಕೆ ಸಮಿತಿ ನಿರ್ಣಯ ಅಂತಿಮವಾಗಿರುತ್ತದೆ. ಸಾಧಕರು ಆ.11ರೊಳಗೆ ಬಿಇಒ ಕಚೇರಿಯಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಅದರ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ಇಲಾಖೆಗಳಿಗೆ ವಹಿಸಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ದೇಶದ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದರು.

ತಹಸೀಲ್ದಾರ್ ಅನೀಲ ಬಡಿಗೇರ ಮಾತನಾಡಿದರು. ಸಿಪಿಐ ಮಲ್ಲಪ್ಪ ಮಡ್ಡಿ, ನಗರಸಭೆ ಪೌರಾಯುಕ್ತ ಜ್ಯೋತಿಗಿರೀಶ ಎಸ್., ಬಿಇಒ ಅಶೋಕ ಬಸನ್ನವರ, ತಾಪಂ ಪ್ರಭಾರಿ ಇಒ ಸಚಿನ್ ಮಾಚಕನೂರ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

ಶೋಕಾಸ್ ನೋಟಿಸ್: ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಗೈರಾಗಿರುವ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ಎಸಿ ಶ್ವೇತಾ ಬೀಡಿಕರ ಸೂಚನೆ ನೀಡಿದರು.