ಜಿಲ್ಲೆ

ಆಂಧ್ರದ ಹಣ್ಣು, ತರಕಾರಿ ಮಾರಾಟ ನಿಷೇಧಿಸಲಿ

ರೈತ ಸಂಘದ ಅಧ್ಯಕ್ಷ ನಾರಾಯಣರೆಡ್ಡಿ ಒತ್ತಾಯ | ಬಾಗೇಪಲ್ಲಿ ಎಪಿಎಂಸಿ ಕಾರ್ಯದರ್ಶಿಗೆ ಮನವಿ

ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ

ಕೋಲಾರ ಜಿಲ್ಲೆಯ ತೋತಾಪುರಿ ಮಾವು ಮಾರಾಟಕ್ಕೆ ನಿರ್ಬಂಧ ಹೇರಿರುವ ನೆರೆಯ ಆಂಧ್ರಪ್ರದೇಶ ಸರ್ಕಾರ ತನ್ನ ಆದೇಶವನ್ನು ಹಿಂಪಡೆಯುವವರೆಗೂ ಆ ರಾಜ್ಯದಲ್ಲಿ ಬೆಳೆದ ಹಣ್ಣು ಮತ್ತು ತರಕಾರಿಗಳ ಮಾರಾಟಕ್ಕೆ ರಾಜ್ಯ ಎಪಿಎಂಸಿ ಮಾರುಕಟ್ಟೆಗಳಲ್ಲಿ ನಿಷೇಧ ಹೇರಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ವಿ.ಆರ್. ನಾರಾಯಣರೆಡ್ಡಿ ಒತ್ತಾಯಿಸಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಪ್ರೊ. ನಂಜುಂಡ ಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ರತ್ನ ಭಾರತ ರೈತ ಸಂಘ ಸಂಯುಕ್ತಾಶ್ರದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.

ಬಾಗೇಪಲ್ಲಿ ಎಪಿಎಂಸಿಯಲ್ಲಿ ರೈತರಿಗೆ ಕನಿಷ್ಠ ಮೂಲಸೌಕರ್ಯ ಕಲ್ಪಿಸುವಲ್ಲಿ ಮಾರುಕಟ್ಟೆ ಆಡಳಿತ ಮಂಡಳಿ ನಿರ್ಲಕ್ಷ್ಯವಹಿಸಿದೆ. ಕುಡಿಯುವ ನೀರಿನ ಸೌಲಭ್ಯ, ವಿಶ್ರಾಂತಿ ಕೊಠಡಿಗಳು ಇಲ್ಲ. ರಾತ್ರಿ ಆಗಮಿಸುವ ರೈತರಿಗೆ ಭದ್ರತೆ ಹಾಗೂ ಸ್ವಚ್ಛತೆ ಇಲ್ಲದಂತಾಗಿದೆ. ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು ರೈತರನ್ನು ವಂಚನೆಗೊಳಗಾಗುವಂತಾಗಿದೆ. ಸಮಸ್ಯೆಗಳನ್ನು ಸರಿಪಡಿಸುವಂತೆ ಎಪಿಎಂಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಅಧಿಕಾರಿಗಳು ಸ್ಪಂದಿಸದಿದ್ದರೆ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಎನ್. ಗೋವಿಂದರೆಡ್ಡಿ ಮಾತನಾಡಿ, ಹೆಚ್ಚು ಮಾವು ಬೆಳೆಯುವ ಕೋಲಾರ ಜಿಲ್ಲೆಯ ಮಾವಿನ ಹಣ್ಣು ಮಾರಾಟವನ್ನು ನಿಷೇಧಿಸಿರುವ ಆಂಧ್ರಪ್ರದೇಶ ಸರ್ಕಾರದ ನಡೆಯಿಂದ ಗಡಿ ಭಾಗದ ರೈತರಿಗೆ ಅನ್ಯಾಯವಾಗಿದೆ. ಸರ್ಕಾರದ ತೀರ್ಮಾನವನ್ನು ರಾಜ್ಯ ರೈತ ಸಂಘ ಖಂಡಿಸುತ್ತಿದೆ. ಪ್ರತಿ ಕ್ವಿಂಟಾಲ್ ಮಾವಿಗೆ 10 ಸಾವಿರ ರೂ. ಕನಿಷ್ಠ ಬೆಂಬಲ ಬೆಲೆ, 8 ಸಾವಿರ ರೂ. ಪ್ರೋತ್ಸಾಹಧನ ನೀಡಬೇಕೆಂದು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.

ರತ್ನ ಭಾರತ ರೈತ ಸಂಘ ಅಧ್ಯಕ್ಷ ಲಕ್ಷ್ಮಣ್, ನಗರ ಕಾರ್ಯದರ್ಶಿ ಹನುಮಯ್ಯ, ರೈತ ಸಂಘದ ತಾಲೂಕು ಅಧ್ಯಕ್ಷ ಎಂ. ವೆಂಕಟಶಿವಾರೆಡ್ಡಿ, ಮುಖಂಡರಾದ ಲಕ್ಷ್ಮೀನರಸಪ್ಪ, ರವಿನಾಯಕ್, ಕೃಷ್ಣಪ್ಪ, ಚೌಡರೆಡ್ಡಿ, ಆಧಿನಾರಾಯಣಪ್ಪ, ಗೋವಿಂದಪ್ಪ, ಕೃಷ್ಣಾರೆಡ್ಡಿ, ನಾರಾಯಣಸ್ವಾಮಿ, ಈಶ್ವರಪ್ಪ, ವೆಂಕಟೇಶಪ್ಪ, ಸುಬ್ಬಾರೆಡ್ಡಿ, ಆಧಿರೆಡ್ಡಿ ಮತ್ತಿತರರು ಇದ್ದರು.