ಚಳ್ಳಕೆರೆ: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಕಲ್ಲು ತೂರಾಟ ಮಾಡಿರುವ ಘಟನೆಯನ್ನು ಭಾರತ ಕಮ್ಯುನಿಸ್ಟ್ ತಾಲೂಕು ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಸಂಚಾಲಕ ಟಿ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಇಂತಹ ದುಷ್ಕೃತ್ಯಗಳಿಂದ ಸಮಾಜದಲ್ಲಿ ಸೌಹಾರ್ದತೆಗೆ ಭಂಗ ಉಂಟಾಗುತ್ತದೆ. ಈ ರೀತಿಯ ಕೃತ್ಯಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಸಂಗತಿಗಳು ಬೆಳೆಯುತ್ತಿವೆ. ಇದರಿಂದ ಕೋಮುಗಲಭೆಗಳು ರಾಜ್ಯದ ಉದ್ದಗಲಕ್ಕೂ ವಿಸ್ತಾರಗೊಳ್ಳುತ್ತಿವೆ. ಕೋಮುವಾದಿ ಶಕ್ತಿಗಳನ್ನು ಕೂಡಲೇ ಮಟ್ಟ ಹಾಕಬೇಕು.
ತಿಂಗಳುಗಟ್ಟಲೇ ಸಂಚಾರ ರಸ್ತೆಗಳಲ್ಲಿ ಟೆಂಟ್, ಶಾಮಿಯಾನ ಕಟ್ಟಿ ಅಡ್ಡಿಪಡಿಸುವ ಹಾಗೂ ಜನಸಂದಣಿಯಾಗುವಂತೆ ಎಲ್ಲ ಧರ್ಮಿಯರು ಕೈಗೊಳ್ಳುವ ಮೆರವಣಿಗೆ ರದ್ದು ಮಾಡಬೇಕು. ಈ ಮೂಲಕ ರಾಜ್ಯದಲ್ಲಿ ಸೌಹಾರ್ದತೆ ಕಾಪಾಡಿಕೊಳ್ಳುವ ಕ್ರಮ ಕೈಗೊಳ್ಳಬೇಕು. ಹಿಂದು-ಮುಸ್ಲಿಮರ ನಡುವಿನ ಬಾಂಧವ್ಯ ಗಟ್ಟಿಗೊಳಿಸಲು ಪೊಲೀಸ್ ಇಲಾಖೆ ಕ್ರಮ ವಹಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.