ಚನ್ನಪಟ್ಟಣ: ಬಮುಲ್ ಚುನಾವಣೆಯನ್ನು ವಾಮಮಾರ್ಗವಾಗಿ ನಡೆಸುವ ಚಿತಾವಣೆ ನಡೆಯುತ್ತಿದೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರು ಅಧಿಕಾರ ದುರುಪಯೋಗಪಡಿಸಿಕೊಂಡು ಜೆಡಿಎಸ್ ಆಡಳಿತವಿರುವ ಎಂಪಿಸಿಎಸ್‌ಗಳನ್ನು ಸೂಪರ್‌ಸೀಡ್ ಮಾಡಿಸುವ ಕಾರ್ಯದಲ್ಲಿ ಎಂದು ಬಮುಲ್ ನಿರ್ದೇಶಕ ಎಚ್.ಸಿ.ಜಯಮುತ್ತು ದೂರಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಹಕಾರ ಸಂಘಗಳ ಸಹಾಯಕ ನಿಬಂಧಕ ವೈ.ವೆಂಕಟೇಶ್ ಅಧಿಕಾರ ದುರ್ಬಳಕೆ ಮಾಡಿಕೊಂಡು ತಾಲೂಕಿನ ಕೆಲ ಎಂಪಿಸಿಎಸ್‌ಗಳಿಗೆ ತೊಂದರೆ ನೀಡುತ್ತಿದ್ದಾರೆ. ಈ ಚುನಾವಣೆ ನ್ಯಾಯಸಮ್ಮತವಾಗಿ ನಡೆಯಬೇಕಾದರೆ ಕೂಡಲೇ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು ಅಥವಾ ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಮೇ 6ರಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಒಕ್ಕೂಟದ ಚುನಾವಣೆಗೆ 18 ದಿನ ಬಾಕಿ ಇದೆ. ಈ ಸಮಯದಲ್ಲಿ ತಾಲೂಕಿನ ಮುದುಗೆರೆ, ಕೋಮನಹಳ್ಳಿ, ತಗಚಗೆರೆ, ಕೂಡ್ಲೂರು, ಪಟ್ಲು, ಕದರಮಂಗಲ, ಹಾರೋಹಳ್ಳಿ, ಕನ್ನಮಂಗಲ, ಕುಕ್ಕೂರುದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಉದ್ದೇಶಪೂರ್ವಕವಾಗಿ ನೋಟಿಸ್ ಜಾರಿ ಮಾಡಲಾಗಿದೆ. ಇದಲ್ಲದೇ ಕೃಷ್ಣಾಪುರ, ಹುಚ್ಚಯ್ಯನದೊಡ್ಡಿ, ಕೊಂಡಾಪುರ, ಚಿಕ್ಕವಿಠ್ಠಲೇನಹಳ್ಳಿ, ಜೆ.ಬ್ಯಾಡರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತ ಮಂಡಳಿಯನ್ನು ಸೂಕ್ತ ವಿಚಾರಣೆ ನಡೆಸದೆ ವಜಾ ಮಾಡಲಾಗಿದೆ. ಜೆಡಿಎಸ್ ಆಡಳಿತ ಮಂಡಳಿ ಇರುವ 20ಕ್ಕೂ ಹೆಚ್ಚು ಡೇರಿಗಳನ್ನು ಸೂಪರ್ ಸೀಡ್ ಮಾಡುವ ಹುನ್ನಾರ ನಡೆಸಲಾಗಿದೆ ಎಂದು ಆರೋಪಿಸಿದರು.
ಸಂಘಗಳ ಪ್ರತಿನಿಧಿಗಳು ಬಮುಲ್ ಚುನಾವಣೆಯಲ್ಲಿ ಭಾಗವಹಿಸದಂತೆ ತಡೆಯಲು ಆಡಳಿತ ಮಂಡಳಿ ಇರುವ ಸಂಘಗಳಿಗೆ ತರಾತುರಿಯಲ್ಲಿ ಆಡಳಿತಾಧಿಕಾರಿ ನೇಮಿಸುವ ಹುನ್ನಾರ ಮಾಡುತ್ತಿದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್. ಆನಂದಸ್ವಾಮಿ ಮಾತನಾಡಿ, ಡೇರಿಗಳಿಗೆ ನೀಡಿರುವ ನೋಟಿಸ್‌ಗಳಿಗೆ ಔಟ್‌ಪುಟ್ ನಂಬರ್ ಇಲ್ಲ. ಎಲ್ಲ ನೋಟಿಸ್‌ಗೂ ಒಂದೇ ಸಂಖ್ಯೆ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಇದನ್ನು ಪರಿಗಣಿಸಿ ಈ ಕೂಡಲೇ ಅವರನ್ನು ಕರ್ತವ್ಯದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಜೆ.ಬ್ಯಾಡರಹಳ್ಳಿ ಡೇರಿ ಉಪಾಧ್ಯಕ್ಷ ಬಸವರಾಜು ಮಾತನಾಡಿ, ಸುಳ್ಳು ಹೇಳಿ ರಾಮನಗರಕ್ಕೆ ನನ್ನನ್ನು ಕರೆಸಿಕೊಂಡು ಒತ್ತಾಯಪೂರ್ವಕವಾಗಿ ರಾಜೀನಾಮೆ ಪಡೆಯಲಾಗಿದೆ ಎಂದು ಆರೋಪಿಸಿದರು. ಇದೇವೇಳೆ ವಿವಿಧ ಎಂಪಿಸಿಎಸ್‌ಗಳ ಅಧ್ಯಕ್ಷರು ಸಂಘಕ್ಕೆ ಆಗುತ್ತಿರುವ ಅನ್ಯಾಯಗಳನ್ನು ತೆರೆದಿಟ್ಟರು.