ಜಿಲ್ಲೆ

ಹೂಬಿಟ್ಟ ಬಿದಿರು ಮತ್ತೆ ಚಿಗುರುತಿದೆ

ಸುಭಾಸ ಹೆಗಡೆ ಧೂಪದಹೊಂಡ

ಶಿರಸಿ: ನಾಲ್ಕೈದು ವರ್ಷಗಳ ಹಿಂದೆ ಜಿಲ್ಲಾದ್ಯಂತ ಹೂಬಿಟ್ಟು ನಾಮಾವಶೇಷವಾಗಿದ್ದ ಬಿದಿರು ಮತ್ತೆ ಎಲ್ಲೆಡೆ ತನ್ನಿಂದ ತಾನೇ ಚಿಗುರಲಾರಂಭಿಸಿದೆ.

ಬಿದಿರು ಹೂ ಬಿಟ್ಟು ಅವಸಾನವಾಗುವ ಹಾಗೂ ಪುನರುತ್ಥಾನವಾಗುವ ಪ್ರಕೃತಿಯ ಈ ಅಪರೂಪದ ಪ್ರಕ್ರಿಯೆ 60 ವರ್ಷಕ್ಕೊಮ್ಮೆ ಘಟಿಸುತ್ತದೆ ಎಂದು ಹಿರಿಯರು ಹೇಳಿದ್ದನ್ನು ಹಾಗೂ ಅಧ್ಯಯನ ವರದಿಗಳಲ್ಲಿ ಓದಿ ತಿಳಿದಾಗಿತ್ತು.

ಈ ಪ್ರಕೃತಿ ಸಹಜ ಪ್ರಕ್ರಿಯೆಗೆ ಉತ್ತರ ಕನ್ನಡ ಕಾಡು ಈ ಶತಮಾನದಲ್ಲಿ ಮೊದಲ ಬಾರಿಗೆ ಸಾಕ್ಷಿಯಾಗಿದೆ.

2018ರಲ್ಲಿ ಕಾಣಿಸಿಕೊಂಡ ಬಿದಿರು ಹೂ

2018 ರಿಂದ 20 ರವರೆಗೆ ಜಿಲ್ಲೆಯ ಎಲ್ಲೆಡೆ ಇದ್ದ ಬಿದಿರು ಮೆಳೆಗಳಲ್ಲಿ ಹೂವು ಕಾಣಿಸಿಕೊಂಡಿತ್ತು. ಅವುಗಳು ತನ್ನಿಂದ ತಾನೇ ಒಣಗಿ ಸತ್ತು ಹೋಗಿದ್ದವು. ನಾಲ್ಕೈದು ವರ್ಷಗಳ ನಂತರ ಹಿಂದೆ ಹಿಂಡುಗಳ ಇದ್ದ ಸ್ಥಳದಲ್ಲೇ ಸಣ್ಣ ಸಸಿಗಳು ಹುಟ್ಟಿರುವುದು ಕಂಡು ಬರುತ್ತಿವೆ.

ಬಿದಿರು ಹುಲ್ಲಿನ ಜಾತಿಗೆ ಸೇರಿದ ಸಸ್ಯ. ಹೂಬಿಟ್ಟ ನಂತರ ಅದರ ಬೀಜ ಉತ್ಪತ್ತಿಯಾಗುತ್ತದೆ.

ಅವು ಗಾಳಿಯಲ್ಲಿ ಹಾರಿ ಅರಣ್ಯದಲ್ಲಿ ಪಸರಿಸಿ ಮಣ್ಣಿನಲ್ಲಿ ಸೇರುತ್ತದೆ. ಕ್ರಮೇಣ ಮೊಳಕೆಯೊಡೆದು ಸಸಿಯಾಗಿ ಬೆಳೆಯುತ್ತವೆ. ಮಾನವ ಹಸ್ತಕ್ಷೇಪ ಆಗದಿದ್ದರೆ ತನ್ನಿಂದ ತಾನೇ ದೊಡ್ಡ ಹಿಂಡು ಮರುಬೆಳವಣಿಗೆ ಆಗುತ್ತದೆ. ಈ ಪ್ರಕ್ರಿಯೆಗೆ ಸಾಮಾನ್ಯವಾಗಿ 2 ರಿಂದ 3 ವರ್ಷ ಬೇಕಾಗುತ್ತದೆ ಎನ್ನುತ್ತಾರೆ ಪರಿಸರ ತಜ್ಞರು.

ಬಿದಿರು ಬೆಳೆ ವಿಸ್ತೀರ್ಣವೆಷ್ಟು..?

ಇತರ ಮರಗಳ ಜತೆಗೆ ಬಿದಿರು ಸೇರಿಕೊಂಡಿರುವುದರಿಂದ ಜಿಲ್ಲೆಯಲ್ಲಿ ನಿರ್ದಿಷ್ಟವಾಗಿ ಇಷ್ಟೇ ಬಿದಿರಿನ ವಿಸ್ತೀರ್ಣವಿದೆ ಇದೆ ಎಂದು ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ.

ಜಿಲ್ಲೆಯ ಅರಣ್ಯ ಅಧ್ಯಯನ ವರದಿಗಳನ್ನು ವೀಕ್ಷಿಸಿದರೆ ಒಟ್ಟಾರೆ ಅರಣ್ಯ ಭಾಗದ ಶೇ. 6 ರಷ್ಟು ಎಂದರೆ ಸುಮಾರು 77 ಹೆಕ್ಟೇರ್ ಇರಬಹುದು ಎಂದು ಅಂದಾಜಿಸಬಹುದು.

ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ ತಾಲೂಕುಗಳು ಕಡಿಮೆ ಬಿದಿರು ಹೊಂದಿರುವ ಪ್ರದೇಶವಾಗಿದ್ದು, ಇಲ್ಲಿ ಪ್ರತಿ ಹೆಕ್ಟೇರ್‌ಗೆ 10 ರಿಂದ 15 ಬಿದಿರಿನ ಹಿಂಡುಗಳು ಮಾತ್ರ ಕಂಡುಬರುತ್ತವೆ.

ಹೆಚ್ಚಾಗಿ ನದಿಗಳ ಪಕ್ಕ ಅಥವಾ ಗುಡ್ಡಗಳಲ್ಲಿ ಮಾತ್ರ ಬಿದಿರು ಕಂಡುಬರುತ್ತದೆ.

ಕೆನರಾ ವೃತ್ತದ (ದಾಂಡೇಲಿ ಕೆಟಿಆರ್ ಸೇರಿ) 26 ಅರಣ್ಯ ವಲಯಗಳಲ್ಲಿ 6 ವಲಯಯಗಳು ಎಂದರೆ ದಾಂಡೇಲಿ, ಗುಂದ, ವರ್ನೋಲಿ, ಸಾಂಬ್ರಾಣಿ, ಯಲ್ಲಾಪುರ, ಕುಳಗಿಗಳಲ್ಲಿ ಬಿದಿರು ಹೇರಳವಾಗಿದೆ.

ಜಗಲಬೇಟ, ಕಾತೂರು, ಕಿರವತ್ತಿ ಮುಂಡಗೋಡ ಅರಣ್ಯ ವಲಯದಲ್ಲಿ ಸಾಮಾನ್ಯವಾಗಿದೆ ಎಂದು ಅರಣ್ಯ ಇಲಾಖೆಯ ವರದಿ ಹೇಳುತ್ತದೆ.

ಸಾಂಬ್ರಾಣಿ ಅತಿ ಹೆಚ್ಚು ಬಿದಿರು ಹೊಂದಿರುವ ಪ್ರದೇಶವಾಗಿದ್ದು, ಪ್ರತಿ ಹೆಕ್ಟೇರ್‌ಗೆ 141 ರಿಂದ 200 ರವರೆಗೂ ಬಿದಿರಿನ ಮೆಳೆಗಳೂ ಸಿಗುತ್ತವೆ.

ಜಿಲ್ಲೆಯಲ್ಲಿರುವ ಬಿದಿರಿನ ತಳಿಗಳು

ಅತಿ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಅರುಂಡಿನೇಶಿಯಾ ಎಂಬ ತಳಿ ಇದೆ.

ಇನ್ನು ಮಧ್ಯಮ ಮಳೆಯಾಗುವ ಪ್ರದೇಶದಲ್ಲಿ ಅರುಂಡಿನೇಶಿಯಾ ಜತೆಗೆ ಡಿ.ಸ್ಟ್ರಿಕ್ಟಸ್ ಎಂಬ ತಳಿ ಕಂಡುಬರುತ್ತದೆ ಎಂದು ಪರಿಸರ ತಜ್ಞ ಡಾ.ಮಾಧವ ಗಾಡ್ಗೀಳ್ ನೇತೃತ್ವದ ತಂಡ ಅರಣ್ಯ ಇಲಾಖೆಗಾಗಿ ಸಿದ್ಧಪಡಿಸಿದ ತಾಂತ್ರಿಕ ಅಧ್ಯಯನ ವರದಿ ‘ಕನ್ಸರ್ವೇಶನ್ ಆ್ ಬಾಂಬೂ ಸೋರ್ಸಸ್ ಆ್ ಕರ್ನಾಟಕ’ ದಲ್ಲಿ ಉಲ್ಲೇಖಿಸಲಾಗಿದೆ.

ಶಿರಸಿ ಅರಣ್ಯ ವಿಭಾಗದಲ್ಲಿರುವ ನರ್ಸರಿಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಬಿದಿರು ಸಸಿಗಳನ್ನು ಬೆಳೆಸಲಾಗುತ್ತಿದೆ. ಬನವಾಸಿ ಭಾಗದಲ್ಲಿ ಬಿದಿರು ಸಸಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಬಿದಿರು ಬೆಳೆಗೆ ಕಟ್ಟೆ ಬಂದು ನಾಶವಾಗಿತ್ತು. ಈ ವರ್ಷ ಅರಣ್ಯ ಪ್ರದೇಶದಲ್ಲಿ ಬಿದಿರು ಸಸಿಗಳು ಕಾಣಿಸಿಕೊಳ್ಳುತ್ತಿವೆ, ಇಲಾಖೆ ಯಿಂದ ಅದರ ಸಂರಕ್ಷಣೆ ಕಾರ್ಯ ನಡೆಯುತ್ತಿದೆ.- ಅಜ್ಜಯ್ಯ, ಡಿಎ್ಒ, ಶಿರಸಿ ಉಪವಿಭಾಗ