ಕೂಡಲಸಂಗಮ: ಗುರುವಿನ ಕೃಪೆಯಿಂದ ಬಾಳು ಬಂಗಾರವಾಗುತ್ತದೆ ಎಂದು ಕಾಶಿ ಪೀಠದ ಜಗದ್ಗುರು ಶ್ರೀ ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಇಲ್ಲಿನ ಸಾರಂಗಮಠದಲ್ಲಿ ಹಮ್ಮಿಕೊಂಡಿದ್ದ ಜಾತವೇದ ಶಿವಾಚಾರ್ಯ ಸ್ವಾಮೀಜಿ ಪುಣ್ಯ ಸ್ಮರಣೋತ್ಸವದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಬಸವಣ್ಣ ಮನೆತನದ ಪರಂಪರೆಯಂತೆ ಉಪನಯನ, ಸಂಸ್ಕಾರ ಪಡೆದಿದ್ದರೆ ಸಾಮಾನ್ಯ ವ್ಯಕ್ತಿಯಾಗಿರಬಹುದಿತ್ತು. ಬಾಲ್ಯದಲ್ಲಿಯೇ ಕ್ರಾಂತಿಕಾರಿ ವಿಚಾರಧಾರೆಗಳಿಂದ ಎತ್ತರಕ್ಕೆ ಬೆಳೆದರು. ಬಸವಣ್ಣ ಕೂಡಲ ಸಂಗಮದ ಸಾರಂಗ ಮಠದ ಜಾತವೇದಮುನಿ ಶಿವಾಚಾರ್ಯರ ಬಳಿ ಅಧ್ಯಯನ ಮಾಡಿದರು. ಜಾತವೇದಮುನಿಗಳು ಬಸವಣ್ಣನಿಗೆ ಅನುಗ್ರಹ ಮಾಡಿದ್ದರ ಲವಾಗಿ ಇಂದು ಜಗಜ್ಯೋತಿಯಾಗಿದ್ದಾರೆ ಎಂದರು.
ಉಜ್ಜಯನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಆಶೀರ್ವಚನ ನೀಡಿ, ಬದುಕನ್ನು ಎಲ್ಲ ರೀತಿ ಸ್ವೀಕರಿಸಬೇಕು. ಸಾವು ನಿಶ್ಚಿತ. ಅದು ಯಾವಾಗ ಬರುತ್ತದೆಯೋ ಗೊತ್ತಿಲ್ಲ. ಸಾವು ಬರುವ ಮುನ್ನ ಏನನ್ನಾದರೂ ಸಾಧನೆ ಮಾಡಬೇಕು ಎಂದು ಹೇಳಿದರು.
ನೊಣವಿನಕೆರೆ ಕಾಡ ಸಿದ್ಧೇಶ್ವರ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದರು. ಚಳಗೇರಿಯ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಡಗಲಿ- ನಿಡಗುಂದಿಯ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬಿಲಕೇರಿಯ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.
ಎಲ್.ಎಂ. ಪಾಟೀಲ ಸ್ವಾಗತಿಸಿದರು. ಅಮರೇಶ ಗೊರಚಿಕ್ಕನವರ ನಿರೂಪಿಸಿದರು.