ಪುತ್ತೂರು: ಬಲ್ನಾಡ್ ಉಳ್ಳಾಲ್ತಿ-ದಂಡನಾಯಕ ದೈವಸ್ಥಾನದಲ್ಲಿ ಅಣ್ಣ ದಂಡನಾಯಕ ಮತ್ತು ತಂಗಿ ಉಳ್ಳಾಲ್ತಿಯ ನೇಮೋತ್ಸವ ಭಾನುವಾರ ನಡೆಯಿತು.
ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಸಂದರ್ಭ ಉಳ್ಳಾಲ್ತಿ ದೈವದ ಕಿರುವಾಳು ಭಂಡಾರ ಬರುವಾಗ ಸಾವಿರಾರು ಮಹಿಳೆಯರು ಸಾಲುಗಟ್ಟಿ ನಿಂತು ಮಲ್ಲಿಗೆ ಹೂ ಅರ್ಪಿಸಬಹುದಾದರೂ, ಬಳಿಕ ೧೨ನೇ ದಿನಕ್ಕೆ ನಡೆಯುವ ಉಳ್ಳಾಲ್ತಿ ದೈವದ ನೇಮೋತ್ಸವವನ್ನು ಮಹಿಳೆಯರು ನೋಡುವಂತಿಲ್ಲ ಎಂಬ ಸಂಪ್ರದಾಯ ಇಂದಿಗೂ ಆಚರಣೆಯಲ್ಲಿದ್ದು, ಪ್ರತಿಯೊಬ್ಬರೂ ಈ ನಿಮಯ ಪಾಲನೆ ಮಾಡುತ್ತಿದ್ದಾರೆ.
ಪುತ್ತೂರು ಜಾತ್ರೆಯ ಧ್ವಜಾವರೋಹಣ ನಡೆದ ಮಾರನೇ ದಿನ ಬಲ್ನಾಡ್ ನೇಮೋತ್ಸವಕ್ಕೆ ಗೊನೆ ಮುಹೂರ್ತ ನಡೆಯುತ್ತದೆ. ಆರನೇ ದಿನದಂದು ಕ್ಷೇತ್ರದ ಮಲರಾಯ ದೈವ ಪಾತ್ರಿಯಲ್ಲಿ ಆವೇಶಗೊಂಡು ಅಭಯದ ನುಡಿಗಳನ್ನು ಹೇಳಿದ ನಂತರ ದೈವದ ನೇತೃತ್ವದಲ್ಲೇ ಮುಂಡ್ಯ ಹಾಕುವ ಕ್ರಮ ನಡೆಯುತ್ತದೆ. ದೈವಗಳ ಭಂಡಾರದ ಮನೆಯ ಎದುರಿನ ವಿಶಾಲ ಗದ್ದೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಗದ್ದೆಯಲ್ಲಿ ಚೆಂಡು ಹಾಕುವ ಪದ್ಧತಿ ಇದ್ದು, ಮಾರನೇ ದಿನ ನೇಮ ಕಟ್ಟುವ ಪರವರಿಗೆ ಎಣ್ಣೆ ಬೂಳ್ಯ ನೀಡಲಾಗುತ್ತದೆ. ಬಳಿಕ ಅವರು ಕ್ಷೇತ್ರದಲ್ಲೇ ತಂಗಬೇಕೆಂಬ ನಿಯಮವಿದೆ.
ಏ.೨೭ರಂದು ಸಾಯಂಕಾಲ ಕ್ಷೇತ್ರದ ಭಂಡಾರ ಮನೆಯಿಂದ ದೈವಗಳ ಭಂಡಾರ ಇಳಿದು ದೈವಸ್ಥಾನಕ್ಕೆ ಬಂದು ೨೮ರಂದು ಮುಂಜಾನೆ ಹೊತ್ತಿಗೆ ದೈವಸ್ಥಾನ ಮತ್ತು ಭಂಡಾರದ ಮನೆಯ ನಡುವಿನ ಗದ್ದೆಯಲ್ಲಿ ದಂಡನಾಯಕ ದೈವದ ವಾಲಸರಿ ನೇಮ ನಡೆಯಿತು. ದಂಡನಾಯಕ ನೇಮ ಮುಗಿಯುವವರೆಗೂ ಪರಿಸರದಲ್ಲಿ ನೂರಾರು ಸಂಖ್ಯೆಯ ಮಹಿಳೆಯರಿದ್ದರೂ, ಆ ಬಳಿಕ ಎಲ್ಲ ಮಹಿಳೆಯರು ತೆರಳಿದರು.
ಮಧ್ಯಾಹ್ನದ ಸಮಯ ದೈವಸ್ಥಾನದ ಒಳಗೆ ಉಳ್ಳಾಲ್ತಿ ನೇಮ ಆರಂಭಗೊಂಡಿತು. ಬೇರೆ ದೈವಗಳಿಗಿಂತ ಭಿನ್ನವಾಗಿ ಇಲ್ಲಿ ಉಳ್ಳಾಲ್ತಿಗೆ ಮದುವಣಗಿತ್ತಿಯ ಅಲಂಕಾರ ಮಾಡಲಾಗುತ್ತದೆ. ಕುಡಿಪ್ಪಾಡಿಯ ನಟ್ಟೋಜ ಮನೆತನದವರು ದೈವಕ್ಕೆ ಚಿನ್ನದ ಮಲ್ಲಿಗೆ ಮೊಗ್ಗು ನೀಡಬೇಕಾಗಿದೆ. ಸಾವಿರಾರು ಸಂಖ್ಯೆಯ ಪುರುಷರು ಉಳ್ಳಾಲ್ತಿ ನೇಮೋತ್ಸವ ನೋಡುತ್ತಾರಾದರೂ ಮಹಿಳೆಯರು ನೋಡಬಾರದು ಎಂಬ ನೂರಾರು ವರ್ಷಗಳ ನಂಬಿಕೆ ಇಂದಿಗೂ ಆಚರಣೆಯಲ್ಲಿದೆ.