ಹಾಸನ: ದಕ್ಷಿಣ ಕನ್ನಡ ಜಿಲ್ಲೆ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ಭಾನುವಾರ ಸಕಲೇಶಪುರ ತಾಲೂಕಿನ ತಾಲೂಕಿನ ಬಾಳ್ಳುಪೇಟೆಯ ಮದುವೆ ದಿಬ್ಬಣದ ಮಿನಿ ಬಸ್ಸೊಂದು ಹೆದ್ದಾರಿ ಬದಿಗೆ ಮಗುಚಿ ಬಿದ್ದು, 12 ಜನರು ಗಾಯಗೊಂಡಿದ್ದಾರೆ.
ಬಸ್ಸಿನಲ್ಲಿದ್ದ ಬಾಳ್ಳುಪೇಟೆಯವಿನೋದಾ ರೈ, ಶ್ರೀಧರ್ ಶೆಟ್ಟಿ, ಜಗನ್ನಾಥ್ ಶೆಟ್ಟಿ, ಪ್ರೇಮಲತಾ , ಡೀಲಾಕ್ಷ, ಚಾಲಕ ಮಹೇಶ್ ಗಂಭೀರ ಗಾಯಗೊಂಡಿದ್ದು ಮಂಗಳೂರು ಹಾಗೂ ಪುತ್ತೂರಿನ ವಿವಿಧ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದ ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಪುತ್ತೂರಿನಲ್ಲಿ ಆಯೋಜನೆಯಾಗಿದ್ದ ಬಾಳ್ಳುಪೇಟೆಯ ಆನಂದ ಶೆಟ್ಟಿ ಅವರ ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಸಂಬಂಧಿಕರು ಪ್ರಯಾಣಿಸುತ್ತಿದ್ದ ಮಿನಿಬಸ್ಸಿನ ಸ್ಟೀರಿಂಗ್ ತುಂಡಾಗಿ, ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ದಾರಿಯ ಬದಿಗೆ ಮಗುಚಿ ಬಿತ್ತು. ಜಯಣ್ಣ ಶೆಟ್ಟಿ ಎಂಬವರು ನೀಡಿದ ದೂರಿನನ್ವಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.