- ಸಾಕ್ಷಿ ನಾಶಪಡಿಸುವ ಉದ್ದೇಶ
- ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಕೊಲೆ
ಬಳ್ಳಾರಿ : ಬತೇಡೇ ಪಾರ್ಟಿಗೆಂದು ಕರೆದು ಯುವಕನೊಬ್ಬನನ್ನು ಕುತ್ತಿಗೆಗೆ ಹಗ್ಗ ಬಿಗಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ತಂಬ್ರಹಳ್ಳಿಯ ಎಲ್‌ಎಲ್‌ಸಿ ಕಾಲುವೆ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಬಾಲಗುಡ್ಡ ಗ್ರಾಮದ ನಿವಾಸಿ ಬಸವನಗೌಡ (27) ಮೃತ. ಪ್ರೀತಿ-ಪ್ರೇಮದ ವಿಚಾರವೇ ಈ ಭೀಕರ ಕೊಲೆಗೆ ಕಾರಣ ಎಂಬುದಾಗಿ ಪ್ರಾಥಮಿಕ ತನಿಖೆಯಲ್ಲಿ ಶಂಕಿಸಲಾಗಿದೆ. ಬಳ್ಳಾರಿಯಲ್ಲಿ ತನ್ನ ಸೋದರ ಮಾವನ ಮನೆಯಲ್ಲಿದ್ದ ಯುವಕ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ.
ಘಟನೆಯ ಹಿನ್ನೆಲೆ : ಜೂ.7 ರಂದು ಸ್ನೇಹಿತನೊಬ್ಬನ ಹುಟ್ಟುಹಬ್ಬದ ಪಾರ್ಟಿಯಿದೆ ಎಂಬುದಾಗಿ ಹೇಳಿ ಬಸವನಗೌಡನನ್ನು ಸ್ನೇಹಿತರು ಶಿವಪುರ ಬಳಿಯ ಎಲ್‌ಎಲ್‌ಸಿ ಕಾಲುವೆ ಹತ್ತಿರ ಕರೆದೊಯ್ದಿದ್ದರು. ಅಲ್ಲಿ ಎಲ್ಲರೂ ಸೇರಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಆರೋಪಿಗಳು ಬಸನವಗೌಡನ ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಸುಟ್ಟು ಹಾಕಿ ಸುಮಾರು ಹದಿಮೂರು ಕಿ.ಮೀ. ದೂರದಲ್ಲಿರುವ ತಂಬ್ರಹಳ್ಳಿಯ ಕಾಲುವೆ ದಂಡೆಗೆ ತಂದು ದೇಹವನ್ನು ಎಸೆದಿದ್ದಾರೆ. ಶಿವಪುರ ಬಳಿ ಯುವಕನ ಬೈಕ್ ಪತ್ತೆಯಾಗಿದೆ. ಈ ಮೋಕಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.