ಬಳ್ಳಾರಿಯ ಬಿಬಿಸಿ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ಭಾಷಾ ಪಠ್ಯಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ವಿವಿ ಕುಲಪತಿ ಪ್ರೊ.ಎಂ.ಮುನಿರಾಜು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಪ್ರೊ.ಸಿ.ಬಿ. ಚಿಲ್ಕರಾಗಿ, ಪ್ರಾಂಶುಪಾಲ ಡಾ.ರಾಮಚಂದ್ರ, ಪ್ರಸಾರಾಂಗದ ನಿರ್ದೇಶಕ ಡಾ.ತಿಪ್ಪೇರುದ್ರ, ಪ್ರೊ. ಸರ್ವಮಂಗಳ ಇದ್ದರು 
ಬಳ್ಳಾರಿ

ಪುಸ್ತಕಗಳಿಂದ ಹೊಸ ವಿಚಾರ ತಿಳಿಯಲಿದೆ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಪುಸ್ತಕ
ಬಳ್ಳಾರಿ : ಪಠ್ಯಪುಸ್ತಕಗಳು ಹೊಸ ಹೊಸ ಜ್ಞಾನ ವಿಚಾರಗಳು ತಿಳಿಸುವ ಮಹತ್ವದ ಸಾಧನಗಳು ಆಗಿವೆ ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಹೇಳಿದರು.
ನಗರದ ಬಿಬಿಸಿ ಕಾಲೇಜಿನಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಸಾರಾಂಗ ಹಾಗೂ ಕನ್ನಡ ವಿಭಾಗದ ಸಹಯೋಗದೊಂದಿಗೆ ಆಯೋಜಿಸಿದ್ದ ಸ್ನಾತಕ ಪದವಿಯ ನಾಲ್ಕನೇ ಸೆಮಿಸ್ಟರ್‌ನ ಕಲಾ ಸೌರಭ-3, ವಾಣಿಜ್ಯ ಸೌರಭ-3, ವಿಜ್ಞಾನ ಸೌರಭ-3 ಕನ್ನಡ ಭಾಷಾ ಪಠ್ಯಪುಸ್ತಕಗಳ ಲೋಕಾರ್ಪಣೆ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಈ ಮೂಲಕ ವಿದ್ಯಾರ್ಥಿಗಳ ದೈನಂದಿನ ಜೀವನದ ಭಾಗಗಳಾಗಿ ಕಾರ್ಯನಿರ್ವಹಿಸಲು ವಿಶ್ವವಿದ್ಯಾಲಯವು ಮಹತ್ವದ ಕಾರ್ಯ ಮಾಡುತ್ತಿದೆ. ಪಠ್ಯಪುಸ್ತಕಗಳು ವೈವಿಧ್ಯಮಯ ಜೀವನದ ಅನುಭವಗಳ ಜತೆಗೆ ವಿವಿಧ ಜ್ಞಾನಶಿಸ್ತುಗಳ ಕೈಪಿಡಿಗಳಾಗಿದ್ದು, ಶೈಕ್ಷಣಿಕ ವ್ಯವಸ್ಥೆಯ ಉದ್ದೇಶಗಳನ್ನು ಸಾಧಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದರು.
ಪಠ್ಯಪುಸ್ತಕಗಳನ್ನು ಉತ್ತಮವಾಗಿ ರಚಿಸಿ ವಿದ್ಯಾರ್ಥಿಗಳಲ್ಲಿ ಔದ್ಯೋಗಿಕ ಭರವಸೆಯನ್ನು ಬೆಳೆಸುವ, ಆತ್ಮವಿಶ್ವಾಸ ತುಂಬುವ ಮಹತ್ವದ ಕಾರ್ಯವನ್ನು ಪ್ರಸಾರಾಂಗ ಮಾಡುತ್ತಿದೆ ಎಂದು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಪ್ರೊ.ಸಿ.ಬಿ. ಚಿಲ್ಕರಾಗಿ ಮಾತನಾಡಿ, ವಿಶ್ವವಿದ್ಯಾಲಯವು ಪ್ರಕಟಿಸಿದ ಪಠ್ಯಪುಸ್ತಕಗಳು ಪ್ರಾಚೀನ ಮತ್ತು ಆಧುನಿಕ ಕವಿಗಳ ಸಂಗಮವಾಗಿವೆ. ವೈವಿಧ್ಯಮಯ ಜ್ಞಾನ ನೀಡುವ ಕಣಜಗಳಾಗಿವೆ, ಹೊಸ ಹೊಸ ಆಲೋಚನೆಗಳನ್ನು ಬೆಳೆಸಲು ಸಹಕಾರಿಯಾಗಿವೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ರಾಮಚಂದ್ರ ಮಾತನಾಡಿ, ಈ ವರ್ಷ ಪಠ್ಯಪುಸ್ತಕಗಳು ವಿದ್ಯಾರ್ಥಿಗಳಿಗೆ ಬಹುಬೇಗ ದೊರೆತಿದ್ದು, ವಿದ್ಯಾರ್ಥಿಗಳು ಅಧ್ಯಯನ ಮಾಡುವುದರ ಮೂಲಕ ಉತ್ತಮ ಅಂಕಗಳನ್ನು ಗಳಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಲಾಸೌರಭ-3, ವಾಣಿಜ್ಯ ಸೌರಭ-3, ವಿಜ್ಞಾನ ಸೌರಭ-3 ಪಠ್ಯಪುಸ್ತಕಗಳನ್ನು ಸಂಪಾದಿಸಿದ ಡಾ.ಎ.ಎಂ.ರಾಜಶೇಖರಯ್ಯ, ಪ್ರೊ.ನಾಗಣ್ಣ ಕಿಲಾರಿ, ಡಾ.ಮಲ್ಲಿಕಾರ್ಜುನ ಎಂ. ಅವರನ್ನು ಸನ್ಮಾನಿಸಲಾಯಿತು.
===