ಬಳ್ಳಾರಿಯ ಬಿಪಿಎಸ್‌ಸಿ ಶಾಲೆಯಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ವಿದ್ಯಾರ್ಥಿಗಳು ಯೋಗಾಭ್ಯಾಸದಲ್ಲಿ ಸೂರ್ಯ ನಮಸ್ಕಾರ ಮಾಡಿದರು. 
ಬಳ್ಳಾರಿ

ಯೋಗ ಜಗತ್ತಿಗೆ ಭಾರತ ನೀಡಿದ ಶ್ರೇಷ್ಠ ಕೊಡುಗೆ

ಪ್ರಮುಖ ಮುಖ್ಯಾಂಶಗಳು

  • ವೃದ್ಧಾಪಕ್ಕಾಗಿ ಯೋಗ ಎಂಬ ವಿಶೇಷ
  • ಯೋಗ ಎಂಬುದು ಕೇವಲ ದೈಹಿಕ ಕಸರತ್ತಲ್ಲ
ಬಳ್ಳಾರಿ : ಯೋಗ ಎಂಬುದು ಕೇವಲ ದೈಹಿಕ ಕಸರತ್ತಲ್ಲ, ಅದು ಇಡೀ ಜಗತ್ತಿಗೆ ಭಾರತ ನೀಡಿದ ಶ್ರೇಷ್ಠ ಕೊಡುಗೆ ಎಂದು ಬಿಪಿಎಸ್‌ಸಿ ಸಂಸ್ಥೆ ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್ ಹೇಳಿದರು.
ನಗರದ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಆ್ಯಂಡ್ ಕಾಲೇಜ್ (ಬಿಪಿಎಸ್‌ಸಿ) ಹಾಗೂ ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ಸಹಯೋಗದೊಂದಿಗೆ ಆರೋಗ್ಯಕರ ವೃದ್ಧಾಪಕ್ಕಾಗಿ ಯೋಗ ಎಂಬ ವಿಶೇಷ ಘೋಷಣೆಯೊಂದಿಗೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೂ.21 ರಂದು ಸೂರ್ಯನ ಬೆಳಕು ಅತಿ ಹೆಚ್ಚು ಸಮಯ ಇರುವ ಸುದೀರ್ಘ ದಿನವಾಗಿರುವುದರಿಂದ, ಆ ದಿನವನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಬೇಕು ಎಂದು ವಿನಂತಿಸಿದ್ದರು. ಅವರ ಈ ಪ್ರಸ್ತಾವನೆಗೆ ಜಗತ್ತಿನ ಎಲ್ಲ ದೇಶಗಳು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಇಡೀ ವಿಶ್ವದಾದ್ಯಂತ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಜಗತ್ತಿಗೆ ಮೊಟ್ಟಮೊದಲ ಬಾರಿಗೆ ಯೋಗವನ್ನು ಪರಿಚಯಿಸಿ, ಕಲಿಸಿಕೊಟ್ಟ ಕೀರ್ತಿ ಪತಂಜಲಿ ಮಹರ್ಷಿಗಳಿಗೆ ಸಲ್ಲುತ್ತದೆ. ಯೋಗ ಕಲಿತ ವಿದ್ಯಾರ್ಥಿಗಳು ಇತರರಿಗೂ ಪ್ರದರ್ಶನ ನೀಡುವ ಮೂಲಕ ಪ್ರೇರಣೆಯಾಗಬೇಕು ಎಂದು ಕರೆ ನೀಡಿದರು.
ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿಯೂ ಪರಿಸರ ದಿನಾಚರಣೆ ದಿನದಂದು ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಚಿತ್ರಕಲಾ ಸ್ಪರ್ಧೆ, ಆರೋಗ್ಯದ ಕಾಳಜಿಗಾಗಿ ಯೋಗ ದಿನಾಚರಣೆ ಅಂತಹ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಮುಂಚೂಣಿಯಲ್ಲಿದೆ. ಒಟ್ಟಾರೆ ಕೇವಲ ಸಮಸ್ಯೆಗಳ ಬಗ್ಗೆ ಅಲ್ಲದೆ, ಸಾಮಾಜಿಕ ಕಳಕಳಿಯನ್ನು ವಿಜಯವಾಣಿ ಹೊಂದಿದೆ ಎಂದು ಪತ್ರಿಕೆ ಕುರಿತು ಶ್ಲಾಘಿಸಿದರು.
ಕಾಲೇಜು ಪ್ರಾಂಶುಪಾಲ ಅನಿಲ್ ಕುಮಾರ್ ಮಾತನಾಡಿ, ಯೋಗ ಎನ್ನುವುದು ಕೇವಲ ಶಾರೀರಿಕ ಆಸನಗಳಿಗೆ ಸೀಮಿತವಾಗಿಲ್ಲ. ಅದು ನಮ್ಮ ಉಸಿರಾಟ, ಆಲೋಚನೆ ಮತ್ತು ಬದುಕಿನ ಶೈಲಿಯಾಗಿದೆ. ಪ್ರಕೃತಿ, ವಿಜ್ಞಾನ ಹಾಗೂ ನಮ್ಮ ಪ್ರಾಚೀನ ಸಂಸ್ಕೃತಿಯ ಅಪೂರ್ವ ಸಂಯೋಜನೆಯೇ ಯೋಗ ದಿನವಾಗಿದೆ. ಜೂನ್‌ನಿಂದ ಡಿಸೆಂಬರ್‌ವರೆಗಿನ ಆರು ತಿಂಗಳ ಕಾಲಾವಧಿಯು ಯೋಗಾಸನ, ಧ್ಯಾನ ಹಾಗೂ ಆಧ್ಯಾತ್ಮಿಕ ಸಾಧನೆಗಳನ್ನು ಆರಂಭಿಸಲು ಅತ್ಯಂತ ಶ್ರೇಷ್ಠ ಮತ್ತು ಪ್ರಶಸ್ತವಾದ ಸಮಯವಾಗಿದೆ. ಯೋಗ ದಿನ ಆಚರಣೆಗೆ 175ಕ್ಕೂ ಹೆಚ್ಚು ದೇಶಗಳು ಇದಕ್ಕೆ ಕೈಜೋಡಿಸಿರುವುದು ನಮ್ಮ ದೇಶದ ಹೆಮ್ಮೆಯಾಗಿದೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಐದ ರಿಂದ ಹತ್ತನೇ ತರಗತಿವರೆಗೆ ಮೂರು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಏಕಾಗ್ರತೆಯಿಂದ ಯೋಗಾಸನಗಳನ್ನು ಪ್ರದರ್ಶಿಸಿದರು. ಶಾಲೆಯ ವಿದ್ಯಾರ್ಥಿನಿಯೊಬ್ಬರು ’ಯೋಗ ಮಾಡಿ ಯೋಗಿಯಾಗು, ಸಾಧನೆ ನಮ್ಮೊಡನಿದೆ ಯೋಗದಿಂದ ರೋಗ ದೂರ’ ಎಂಬ ಗೀತೆ ಹಾಡಿದರು. ಯೋಗ ಶಿಕ್ಷಕ ರಾಮಕೃಷ್ಣ ಅವರು ಮಕ್ಳಳಿಗೆ ಪ್ರಾಣಾಯಾಮ ಹಾಗೂ ಯೋಗಾಭ್ಯಾಸ ಮಾಡಿಸಿದರು. ಶಾಲಾ ಶಿಕ್ಷಕಿ ಶಿಲ್ಪಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜಿನ ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿಯ ಸಿಬ್ಬಂದಿ ಭಾಗವಹಿಸಿ ಯೋಗ ದಿನ ಯಶಸ್ವಿಗೊಳಿಸಿದರು.