ಹರಪನಹಳ್ಳಿಯಲ್ಲಿ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಮತ್ತು ಸಿಪಿಐಎಂಎಲ್‌ದಿಂದ ಗ್ರೇಡ್-2 ತಹಸೀಲ್ದಾರ್ ನಟರಾಜ್‌ಗೆ ಮನವಿ ಸಲ್ಲಿಸಲಾಯಿತು. ಸಿಪಿಐಎಂಎಲ್ ತಾಲೂಕು ಕಾರ್ಯದರ್ಶಿ ಗುಳೇದಹಟ್ಟಿ ಸಂತೋಷ, ಎಐಸಿಸಿಟಿಯು ಸದಸ್ಯರಾದ ಮಹಮ್ಮದ್ ರಫಿ, ಇಬ್ರಾಹಿಂ ಸಾಬ್, ಬಾಗಳಿ ರೇಣುಕಮ್ಮ, ಕಲೀಮ್ ಇತರರಿದ್ದರು.
ಹೊಸ ಕಾಯ್ದೆಯಿಂದ ಕಾರ್ಮಿಕರು ಬೀದಿಪಾಲು
ಹರಪನಹಳ್ಳಿ: ಕೇಂದ್ರ ಸರ್ಕಾರ ನರೇಗಾ ಯೋಜನೆ ಹೆಸರು ಬದಲಾಯಿಸಿ ಉದ್ಯೋಗದ ಹಕ್ಕನ್ನು ಕಸಿದುಕೊಂಡಿದೆ ಎಂದು ಆರೋಪಿಸಿ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಮತ್ತು ಸಿಪಿಐಎಂಎಲ್ ಸಹಯೋಗದಲ್ಲಿ ನಗರದ ಐಬಿ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ನಟರಾಜ್‌ಗೆ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಹುಲಿಕಟ್ಟಿ ಮೈಲಪ್ಪ ಮಾತನಾಡಿ, ಕೇಂದ್ರ ಸರ್ಕಾರ ಸಾರ್ವಜನಿಕ ಉದ್ದಿಮೆ ಸಂಸ್ಥೆಗಳನ್ನು ಬಂಡವಾಳಶಾಹಿಗಳಿಗೆ ಹರಾಜು ಹಾಕಿ ಕಾರ್ಮಿಕರನ್ನು ಬೀದಿಪಾಲು ಮಾಡಿದೆ. ಉದ್ಯೋಗ ಖಾತ್ರಿ ಯೋಜನೆ ಹೆಸರು ಬದಲಿಸುವುದರೊಂದಿಗೆ ಹೊಸ ಕಾಯ್ದೆಯಿಂದ ದುಡಿಯುವ ಕೈಗಳನ್ನು ಕಟ್ಟಿ ಹಾಕಿದಂತಾಗಿದೆ.
ಹೊಸ ಕಾಯ್ದೆಯಂತೆ 125 ದಿನ ಕೆಲಸ ನೀಡಬೇಕಿದೆ. ಆದರೆ, ಇನ್ನು ಮುಂದೆ ಆಯ್ದ ಪ್ರದೇಶಗಳ ಜನರಿಗೆ ಮಾತ್ರ ಕೆಲಸ ಸಿಗಲಿದೆ ಎಂದು ತಿಳಿಸಿದರು.
ಈ ಹಿಂದೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೆಚ್ಚ ಹಂಚಿಕೆ 90:10 ಇತ್ತು. ಹೊಸ ಪದ್ಧತಿ ಪ್ರಕಾರ ಈಶಾನ್ಯ ರಾಜ್ಯಗಳು ಮತ್ತು ಕೇಂದ್ರಡಳಿತ ಪ್ರದೇಶಗಳಿಗೆ ಮಾತ್ರ ಈ ನಿಯಮ ಅನ್ವಯಿಸಲಿದ್ದು, ಉಳಿದ ರಾಜ್ಯಗಳಿಗೆ 60:40 ವೆಚ್ಚ ಹಂಚಿಕೆ ಆಗಲಿದೆ. ಆದ್ದರಿಂದ ಕೆಲ ರಾಜ್ಯಗಳಿಗೆ ಹಣದ ಹೊರೆಯಾಗಲಿದೆ ಎಂದರು.
ಸಿಪಿಐಎಂಎಲ್ ಜಿಲ್ಲಾಧ್ಯಕ್ಷ ಸಂದೇರ ಪರುಶುರಾಮ್ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ರಾಜ್ಯದ ಜನರು ಹೆಚ್ಚು ಗುಳೆ ಹೋಗುತ್ತಾರೆ. ಬಡ ರಾಜ್ಯಗಳಿಗೆ ಹೊಸ ಕಾಯ್ದೆ ಆರ್ಥಿಕ ಹೊಣೆ ಹೆಚ್ಚಿಸಲಿದೆ. ಇದರಿಂದ ಯಾವುದೇ ಸುಧಾರಣೆ ಆಗುವುದಿಲ್ಲ. ಜತೆಗೆ ಸಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಅಂಶಗಳನ್ನು ತೆಗೆದುಹಾಕಲಾಗಿದೆ. ಆದ್ದರಿಂದ ಈ ಕಾಯ್ದೆ ಹಿಂಪಡೆಯಬೇಕು. ಯೋಜನೆ ಹೆಸರು ಬದಲಿಸುವಲ್ಲಿ ಆರ್‌ಎಸ್‌ಎಸ್ ಪಾತ್ರವಿದೆ ಎಂದು ದೂರಿದರು.
ಎಐಎಸ್‌ಎ ತಾಲೂಕು ಅಧ್ಯಕ್ಷ ವಿನಯ್, ಸದಸ್ಯರಾದ ಬಿಎಸ್ ಪ್ರಕಾಶ್, ಕೃಷ್ಣಕುಮಾರ್, ಅಂಜಿನಿ, ಪ್ರಮುಖರಾದ ರಾಮಣ್ಣ, ಮಂಜು, ಜೋಗಿನ ನಾಗರಾಜ, ಮೋಹನ್ ಕುಮಾರ್ ಇತರರಿದ್ದರು.