ಬಳ್ಳಾರಿಯ ಪಶು ಸಂಗೋಪನಾ ಇಲಾಖೆಯ ಕಚೇರಿಯ ಹೊರನೋಟ
ಬಳ್ಳಾರಿ : ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ(ಕೆಎಂಆರ್‌ಸಿ) ಅನುದಾನದ ಮಹತ್ವಾಕಾಂಕ್ಷೆಯ ಯೋಜನೆಗಳು ಜಿಲ್ಲೆಯಲ್ಲಿ ಅಧಿಕಾರಿಗಳ ನಿರ್ಲಕ್ಷೃ ಮತ್ತು ವಿಳಂಬ ಧೋರಣೆಯಿಂದಾಗಿ ನನೆಗುದಿಗೆ ಬಿದ್ದಿವೆ. ಕಳೆದ ಒಂದೂವರೆ ವರ್ಷದ ಹಿಂದೆಯೇ ಕೆಎಂಆರ್‌ಸಿಯಿಂದ ಅನುಮೋದನೆ ದೊರೆತರೂ, ಕಾಮಗಾರಿಗಳು ಇನ್ನೂ ಆರಂಭಗೊಂಡಿಲ್ಲ.
ಪಶು ಸಂಗೋಪನಾ ಇಲಾಖೆಯ ಅಧೀನದ ಬಳ್ಳಾರಿಯಲ್ಲಿನ ಇಲಾಖೆಯ ಕಟ್ಟಡ ನವೀಕರಣ, ಸಂಡೂರಿನಲ್ಲಿ ಪಶುಸಂಗೋಪನ ಇಲಾಖೆಯ ಹೊಸ ಕಟ್ಟಡ ನಿರ್ಮಾಣವೂ 7.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದೆ. ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಕುರೆಕುಪ್ಪದಲ್ಲಿನ ಇಲಾಖೆಯ ಕಟ್ಟಡದ ನವೀಕರಣ, ಆವರಣ ಗೋಡೆ, ಸಿಬ್ಬಂದಿ ವಸತಿ ಗೃಹ ಮತ್ತು ಯಾಂತ್ರಿಕೃತ ಕೋಳಿ ಸಾಕಣೆ ಕೇಂದ್ರ ಸ್ಥಾಪನೆಗೆ ಉದ್ದೇಶಿಸಿದೆ. ಇನ್ನೂ ಬಂಡ್ರಿ ಗ್ರಾಮದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ಕುರಿ-ಮೇಕೆ ಸಂತೆ ಮಾರುಕಟ್ಟೆ ಹಾಗೂ ಕುಡಿತಿನಿ ಬಳಿ ಕುರಿ ಉಣ್ಣೆ ಉಗ್ರಾಣ ನಿರ್ಮಾಣದ ಯೋಜನೆ ರೂಪಿಸಿ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಇದಲ್ಲದೇ, ಬಳ್ಳಾರಿ ಮತ್ತು ಸಂಡೂರು ತಾಲೂಕುಗಳಲ್ಲಿ 5 ಕೋಟಿ ರೂ. ವೆಚ್ಚದಲ್ಲಿ 25 ಮಹಿಳಾ ಹಾಲು ಉತ್ಪಾದಕ ಸಹಕಾರ ಸಂಘಗಳನ್ನು ಸ್ಥಾಪಿಸಿ, ಅವುಗಳಿಗೆ ಅಗತ್ಯ ಯಂತ್ರೋಪಕರಣಗಳನ್ನು ಅಳವಡಿಸುವ ಮೂಲಕ ಹಾಲು ಉತ್ಪಾದಕರ ಸಬಲೀಕರಣಕ್ಕೆ ಬೃಹತ್ ಯೋಜನೆ ಕೈಗೊಂಡಿತ್ತು.
ವಿಳಂಬಕ್ಕೆ ಕಾರಣ : ಯೋಜನೆಗಳ ಅನುದಾನಕ್ಕೆ ಕೆಎಂಆರ್‌ಸಿಯಿಂದ ಅನುಮೋದನೆ ದೊರತಿದೆ. ಕಾಮಗಾರಿ ಅನುಷ್ಠಾನದ ಜವಾಬ್ದಾರಿ ಹೊತ್ತವರ ಮೀನಮೇಷ ತೋರುತ್ತಿರುವುದರಿಂದ ಯೋಜನೆಗಳು ನನೆಗುದಿಗೆ ಬಿದ್ದಿವೆ. ಆರಂಭದಲ್ಲಿ ಈ ಕಾಮಗಾರಿಗಳ ನಿರ್ಮಾಣವನ್ನು ‘ ನಿರ್ಮಿತಿ ಕೇಂದ್ರ’ ಕ್ಕೆ ವಹಿಸಲಾಗಿತ್ತು. ನಂತರ ‘ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮ’ (ಕೆಆರ್‌ಐಡಿಎಲ್)ಕ್ಕೆ ಹಸ್ತಾಂತರಿಸಲಾಯಿತು. ಕೆಆರ್‌ಡಿಐಎಲ್‌ಗೆ ವಹಿಸಿದಾಗ, ಟೆಂಡರ್ ಪ್ರಕ್ರಿಯೆ ನಡೆಸದೆ ನೇರವಾಗಿ ಏಜೆನ್ಸಿಗೆ ಗುತ್ತಿಗೆ ನೀಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದವು. ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸದ್ಯ ’ಪಿಡಬ್ಲ್ಯೂಡಿ’ ಇಲಾಖೆಗೆ ವಹಿಸಲಾಗಿದೆ.
ಪ್ರಸ್ತುತ ಪಿಡಬ್ಲ್ಯೂಡಿ ಇಲಾಖೆಯು ಹೊಸದಾಗಿ ಟೆಂಡರ್ ಪ್ರಕ್ರಿಯೆ ಸಿದ್ಧಪಡಿಸುತ್ತಿದೆ. ಟೆಂಡರ್ ಅಂತಿಮಗೊಳಿಸಿ, ಕೆಎಂಆರ್‌ಸಿಗೆ ಡಿಪಿಆರ್ ಸಲ್ಲಿಸಿದ ಬಳಿಕ ಅನುದಾನ ಬಿಡುಗಡೆಯಾಗಲಿದೆ. ಈ ದೀರ್ಘ ಪ್ರಕ್ರಿಯೆಯಿಂದಾಗಿ ಕಾಮಗಾರಿ ಆರಂಭಕ್ಕೆ ಮತ್ತಷ್ಟು ಸಮಯ ಹಿಡಿಯುವುದು ಖಚಿತವಾಗಿದ್ದು, ಅಧಿಕಾರಿಗಳ ಈ ಧೋರಣೆ ಗಣಿಬಾಧಿತ ಜನಸಾಮಾನ್ಯರಿಗೆ ನಿರಾಸೆ ಮೂಡಿಸಿದೆ. ಒಂದೂವರೆ ವರ್ಷದ ಹಿಂದೆಯೇ ಅನುದಾನವಿದ್ದರೂ ಯೋಜನೆಗಳು ಕೇವಲ ಕಡತಗಳಿಗೆ ಸೀಮಿತವಾಗಿದ್ದು ಏಕೆ? ಆಡಳಿತ ಯಂತ್ರದ ಈ ವಿಳಂಬಕ್ಕೆ ಹೊಣೆ ಯಾರು? ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.
ಇಲಾಖೆಯಲ್ಲಿ ಸಿಬ್ಬಂದಿ ಕೊರತೆ : ಪಶುಸಂಗೋಪನಾ ಇಲಾಖೆಗೆ ಇದೇ ಏ.21ರಿಂದ ಜಿಲ್ಲಾದ್ಯಂತ ಜಾನಾವಾರುಗಳಿಗೆ ಒಂಬತ್ತನೇ ಕಾಲು ಬಾಯಿ ಲಸಿಕೆ ವಿತರಿಸಲು ಸರ್ಕಾರ ಆದೇಶಿಸಿದೆ. ಜಿಲ್ಲೆಯಲ್ಲಿ ಎತ್ತು, ಹಸು, ಎಮ್ಮೆ, ಕೋಣ ಸೇರಿ ಒಟ್ಟು 1.50 ಲಕ್ಷ ರಾಸುಗಳಿವೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ರಾಸುಗಳು ಸಂಖ್ಯೆ ಹೆಚ್ಚಿರುವುದಿಂದ ಸಿಬ್ಬಂದಿಯೂ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಲಸಿಕೆ ವಿತರಿಸಬೇಕು. ಜಿಲ್ಲೆಯ ನಗರ ಹಾಗೂ ಐದು ತಾಲೂಕಿನ ಇಲಾಖೆಗಳಲ್ಲಿ 260 ಮಂಜೂರಾದ ಹುದ್ದೆಗಳ ಪೈಕಿ ಕೇವಲ 83 ಸಿಬ್ಬಂದಿ ಮಾತ್ರ ಭರ್ತಿಯಾಗಿದೆ. ಸದ್ಯ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ದಿನೇ ದಿನೆ ಏರಿಕೆಯಾಗುತ್ತಿರುವುದು ಒಂದಡೆಯಾದರೆ, ಸಿಬ್ಬಂದಿ ಕೊರತೆಯು ದೊಡ್ಡ ತಲೆನೋವುಯಾಗಿ ಪರಿಣಮಿಸಿದೆ.
ಕೋಟ್.... ಕಾಮಗಾರಿಗಳ ಗುಣಮಟ್ಟ ಹಾಗೂ ತ್ವರಿತಗತಿ ಪೂರ್ಣಗೊಳಿಸುವ ಉದ್ದೇಶದಿಂದ ಪಶುಸಂಗೋಪನಾ ಇಲಾಖೆಯ ಅಧೀನದಲ್ಲಿನ ಕಟ್ಟಡಗಳ ನಿರ್ಮಾಣ ಪಿಡಬ್ಲೂಡಿಗೆ ವಹಿಸಲಾಗಿದೆ. ಟೆಂಡರ್ ಪ್ರಕ್ರಿಯೆ ನಂತರ ಕಾಮಗಾರಿ ಆರಂಭಗೊಳ್ಳಲಿವೆ.
- ನಾಗೇಂದ್ರ ಪ್ರಸಾದ್ ಕೆ., ಡಿಸಿ, ಬಳ್ಳಾರಿ.