ಬಳ್ಳಾರಿಯ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ನ್ಯಾಯಾಧೀಶ ಸಿದ್ದಲಿಂಗಪ್ರಭು ಉದ್ಘಾಟಿಸಿದರು. ನ್ಯಾ.ರಾಜೇಶ್ ಎನ್.ಹೊಸಮನೆ, ಡಿಡಿಪಿಐ ಜೆ.ಎಂ.ತಿಪ್ಪೇಸ್ವಾಮಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಬಿ.ಎಸ್.ಮುರಳೀಧರ, ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಟಿ.ಎಂ. ಸಿದ್ದೇಶ್ವರ ಬಾಬು ಇತರರಿದ್ದರು. 
ಬಳ್ಳಾರಿ

ಪರಿಸರ ಉಳಿವಿಗೆ ಶ್ರಮಿಸಬೇಕಿದೆ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಮಾನವನ ಉತ್ತಮ ಆರೋಗ್ಯ
  • ಪರಿಸರಕ್ಕೂ ಒಂದು ಅವಿನಾಭಾವ ಸಂಬಂಧ
ಬಳ್ಳಾರಿ : ಪರಿಸರದಿಂದ ಪ್ರೇರಣೆಗೊಂಡು, ಮುಂದಿನ ಉಜ್ವಲ ಭವಿಷ್ಯ ಮತ್ತು ಅತ್ಯುತ್ತಮ ಹವಾಮಾನಕ್ಕಾಗಿ ಪಣತೊಡಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸಿದ್ದಲಿಂಗಪ್ರಭು ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಅರಣ್ಯ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಸಹಯೋಗದೊಂದಿಗೆ ಪ್ರಕೃತಿಯಿಂದ ಪ್ರೇರಿತ-ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ ಎಂಬ ಘೋಷವಾಕ್ಯದೊಂದಿಗೆ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇವಲ ಪಣತೊಡುವುದಷ್ಟೇ ಅಲ್ಲದೆ, ಆ ನಿಟ್ಟಿನಲ್ಲಿ ನಾವೆಲ್ಲರೂ ದೈನಂದಿನ ಜೀವನದಲ್ಲಿ ಶ್ರಮಿಸಬೇಕಾಗಿದೆ. ಮಾನವನ ಉತ್ತಮ ಆರೋಗ್ಯ ಪ್ರಕೃತಿಯಿಂದಲೇ ಸಿಗುತ್ತದೆ. ಹಾಗಾಗಿ ನಮ್ಮ ದೈನಂದಿನ ಜೀವನ ಕ್ರಮಕ್ಕೂ ಮತ್ತು ಪರಿಸರಕ್ಕೂ ಒಂದು ಅವಿನಾಭಾವ ಸಂಬಂಧವಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಮಾತನಾಡಿ, ಮಾನವನ ಅಸ್ತಿತ್ವಕ್ಕೆ ಪರಿಸರ ಅತ್ಯಂತ ಅತ್ಯಗತ್ಯವಾಗಿದ್ದು, ಪ್ರಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಪರಿಸರ ಮಾಲಿನ್ಯದ ಭೀತಿ ಹೆಚ್ಚಾಗುತ್ತಿದ್ದು, ನಾವೆಲ್ಲರೂ ಜಾಗೃತರಾಗಬೇಕಾದ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಚ್ಚರಿಸಿದರು.
ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜ ಮಾತನಾಡಿ, ಮನುಷ್ಯ ಮತ್ತು ವೃಕ್ಷಗಳ ನಡುವೆ ಪ್ರಕೃತಿಯೇ ರೂಪಿಸಿರುವ ಅದ್ಭುತ ಸಂಬಂಧವಿದೆ. ಪ್ರಕೃತಿಯಿಂದ ಯಾವುದೇ ಒಂದು ಜೀವಿ ಅಳಿದರೂ ಅದರ ತೀವ್ರತೆ ಮನುಷ್ಯನಿಗೆ ತಡವಾಗಿ ಅರ್ಥವಾಗುತ್ತದೆ. ನಾವು ಕೃತಕವಾಗಿ ಸೃಷ್ಟಿಸುವ ಪರಿಸರ ಎಂದಿಗೂ ನೈಸರ್ಗಿಕ ಪರಿಸರಕ್ಕೆ ಸಮನಾಗಲಾರದು. ಪರಿಸರ ದಿನಾಚರಣೆ ಎಂದರೆ ಕೇವಲ ಗಿಡ ನಡುವುದು ಮಾತ್ರವಲ್ಲ, ನಮ್ಮ ದೈನಂದಿನ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದಾಗಿದೆ ಎಂದರು.
ವಿಎಸ್‌ಕೆ ವಿವಿ ಪ್ರೊ.ನಾಗಭೂಷಣ ವಿ.ಚರಂತಿಮಠ ಹಾಗೂ ವೀರಶೈವ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಜಿ.ಮನೋಹರ ಅವರು ಪರಿಸರ ರಕ್ಷಣೆ, ಬೆಳೆಸುವಿಕೆ ಅಂಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಆವರಣದಲ್ಲಿ ಗಣ್ಯರು ಸಸಿಗಳನ್ನು ನೆಟ್ಟು ನಿರೂಣಿಸಿದರು. ಬಳಿಕ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಸರ್ಕಾರಿ, ಖಾಸಗಿ, ಅನುದಾನಿತ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
===