ಸಂಡೂರು ತಾಲೂಕು ದೌಲತ್‌ಪುರ ಗ್ರಾಮದಲ್ಲಿ ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರತಿಭಟನೆ ನಡೆಸಿದರು. ಎಐಡಿಎಸ್‌ಒ ಗ್ರಾಮ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ್, ಸದಸ್ಯರಾದ ತಿಪ್ಪೇಸ್ವಾಮಿ, ಕಾರ್ಯದರ್ಶಿ ಕಲೀಲ್, ಮಾಬುಸಾಬ್, ಕರಿಬಸಪ್ಪ, ಬಸವರಾಜ್ ಗ್ರಾಮಸ್ಥರಿದ್ದರು. 
ಬಳ್ಳಾರಿ

ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಅಲೆದಾಡುವ ಪರಿಸ್ಥಿತಿ ಬೇಡ

ಸಂಡೂರು: ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಜಾರಿಗಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರದ ನಡೆ ಖಂಡಿಸಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಪಾಲಕರು ತಾಲೂಕು ದೌಲತ್‌ಪುರ ಗ್ರಾಮದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ದೌಲತ್‌ಪುರ ಗ್ರಾಮದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿಗಾಗಿ ಸ್ಕೂಲ್‌ಗಳನ್ನು ಮುಚ್ಚಲು ಹೊರಟಿರುವುದು ಸರಿಯಲ್ಲ. ಇದು ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿದೆ. ಸರ್ಕಾರದ ಮುಚ್ಚುವ ಪ್ರಕ್ರಿಯೆ ಕೈ ಬಿಡಲಿ ಎಂದು ಸಂಘಟನೆ ತಾಲೂಕು ಸಂಚಾಲಕ ಕಂಬಳಿ ಮಂಜುನಾಥ ಒತ್ತಾಯಿಸಿದರು.
2025 ಅ.15ಹಾಗೂ ಡಿ.30ರಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಆದೇಶಗಳ ಪ್ರಕಾರ ರಾಜದಲ್ಲಿ ಗ್ರಾಪಂ (ಕೆಪಿಎಸ್ ಮ್ಯಾಗ್ನೆಟ್) ಒಂದು ಶಾಲೆಯಂತೆ 6 ಸಾವಿರ ಶಾಲೆಗಳು ಮಾತ್ರ ಉಳಿಸಿಕೊಳ್ಳಲಿದೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆಯ 5 ಕಿಮೀ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ಅಡಗಿದೆ. ಈಗಾಗಲೇ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ 70ಕ್ಕೂ ಹೆಚ್ಚು ಹಾಗೂ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 95ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈಗ ಊರಿಂದ ಸುಮಾರು 6 ಕಿಮೀ ಇರುವ ಸುಶೀಲಾನಗರಕ್ಕೆ ಸೇರಿಸಲು ಮುಂದಾಗಿದೆ. ಇದರಿಂದ ದುಡಿಯುವ ಕಾರ್ಮಿಕ, ರೈತರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ಖಂಡಿತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿ ವೃತ್ತಿಪರ ಶಿಕ್ಷಣ ಆರಂಭಿಸುವ ನಿರ್ಧಾರ ಮಾಡಲಾಗಿದೆ. 6ನೇ ತರಗತಿಯಿಂದ ಮಕ್ಕಳಿಗೆ ಅಡಿಕೆ ಸುಲಿಯುವುದು, ಟೈಲರಿಂಗ್, ಮಣ್ಣಿನ ಹಣತೆ ಮಾಡುವ ಕೌಶಲಗಳನ್ನು ಕಲಿಸುವುದಾಗಿ ಶಿಕ್ಷಣ ಮಂತ್ರಿಗಳು ಬಹಿರಂಗ ಪಡಿಸಿದ್ದಾರೆ. ಕಾರ್ಮಿಕರ ಮಕ್ಕಳನ್ನು ಕಾರ್ಮಿಕರನ್ನಗಿಯೇ ಉಳಿಸುವುದು ಸರ್ಕಾರದ ಹುನ್ನಾರವಾಗಿದೆ ಎಂದು ಟೀಕಿಸಿದರು.