ವಿಜಯವಾಣಿ ಪತ್ರಿಕೆಯ ಪ್ರತಿಷ್ಠಿತ ‘ವಿಜಯರತ್ನ’ ಪ್ರಶಸ್ತಿ ಪುರಸ್ಕೃತರೂ ಆದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ. ತಿಪ್ಪೇಸ್ವಾಮಿ ಅವರನ್ನು ಕೂಡ್ಲಿಗಿ ಪ್ರವಾಸಿ ಮಂದಿರದಲ್ಲಿ ಶನಿವಾರ ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಸನ್ಮಾನಿಸಲಾಯಿತು. ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಂ. ಗುರುಸಿದ್ದನ ಗೌಡ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸುನೀಲ್ ಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎಸ್. ಗಿರೀಶ್, ಕಾರ್ಯದರ್ಶಿ ಮಠಪತಿ ಮಂಜುನಾಥ, ಉಪಾಧ್ಯಕ್ಷ ಸೋಮಶೇಖರ್ ಗೌಡ, ಖಜಾಂಜಿ ಮರುಳಸಿದ್ದಪ್ಪ, ನಿರ್ದೇಶಕರಾದ ಅಂಬಿಕಾ, ಟಿ. ಮಂಜುಳಾ, ಕೆ.ಎಚ್.ಎಂ. ಶೈಲಜಾ ಇದ್ದರು.
ಕೂಡ್ಲಿಗಿ: ಯುದ್ಧದ ಸಂದಿಗ್ಧತೆಯಲ್ಲೂ ‘ವಿಜಯರತ್ನ’ ಪ್ರಶಸ್ತಿ ಪುರಸ್ಕೃತರನ್ನು ಸುರಕ್ಷಿತವಾಗಿ ಕರೆತಂದ ವಿಆರ್‌ಎಲ್ ಎಂಡಿ ಆನಂದ ಸಂಕೇಶ್ವರ ಅವರ ಧೈರ್ಯವನ್ನು ನಾವು ಮೆಚ್ಚಲೇಬೇಕು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ. ತಿಪ್ಪೇಸ್ವಾಮಿ ಹೇಳಿದರು.
‘ವಿಜಯರತ್ನ’ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರ ಜಿಲ್ಲಾ ಬಿಡಿಸಿಸಿ ಬ್ಯಾಂಕಿನ ಎಲ್ಲ ಶಾಖೆಗಳಲ್ಲಿ ಅಂತರ್ಜಾಲ ಸುಧಾರಿತ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇ-ಬ್ಯಾಂಕಿಂಗ್, ಎಟಿಎಂ ಹಾಗೂ ಮೊಬೈಲ್ ಬ್ಯಾಂಕಿಂಗ್ ಮೂಲಕ ಗ್ರಾಹಕರಿಗೆ ಹಾಗೂ ರೈತರಿಗೆ ತಮ್ಮ ಕೈಯಲ್ಲಿಯೇ ವ್ಯವಹಾರದ ಮಾಹಿತಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ರೈತರ ಸಾಲವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡುವುದರ ಜೊತೆಗೆ ಹೆಚ್ಚಿನ ಸಾಲ ಸೌಲಭ್ಯ ನೀಡಿ ವಸೂಲಾತಿಯಲ್ಲೂ ಕಟ್ಟುನಿಟ್ಟಿನ ಪಾಲನೆ ಮಾಡಲಾಗಿದೆ. ಬ್ಯಾಂಕ್ ಅಧಿಕ ನಿವ್ವಳ ಲಾಭ ಗಳಿಸಲು ಸಿಬ್ಬಂದಿಯ ಕಾರ್ಯಕ್ಷಮತೆ ಕಾರಣವಾಗಿದ್ದು, ಅವರ ಶ್ರಮ ಶ್ಲಾಘನೀಯ. ಈ ನಿಟ್ಟಿನಲ್ಲಿ ಸರ್ಕಾರವು ಸಹಕಾರಿ ರತ್ನ ಪ್ರಶಸ್ತಿ ನೀಡಿದೆ. ದೆಹಲಿಯಲ್ಲೂ ರಾಜ್ಯದ ಸಹಕಾರಿ ಬ್ಯಾಂಕ್‌ನ ಅತ್ಯುತ್ತಮ ಅಧ್ಯಕ್ಷ ಎಂಬ ಗೌರವ ಲಭಿಸಿದೆ. ಇದರ ಭಾಗವಾಗಿ ರಾಜ್ಯದ ನಂಬರ್ ಒನ್ ಪತ್ರಿಕೆ ‘ವಿಜಯವಾಣಿ’ಯಿಂದ ದುಬೈನಲ್ಲಿ ‘ವಿಜಯರತ್ನ’ ಪ್ರಶಸ್ತಿ ನೀಡಿ ಗೌರವಿಸಿದ್ದು ನನ್ನ ಜೀವನದ ಮೈಲಿಗಲ್ಲು ಎಂದು ಸ್ಮರಿಸಿದ ಅವರು, ಕೊಲ್ಲಿ ಯುದ್ಧದ ಭೀಕರತೆಯಲ್ಲೂ ನಮ್ಮನ್ನು ಸುರಕ್ಷಿತ ವಾಗಿ ತಾಯ್ನಡಿಗೆ ಕರೆತರುವಲ್ಲಿ ವಿಜಯವಾಣಿ ಪತ್ರಿಕೆಯ ಎಂ.ಡಿ. ಆನಂದ ಸಂಕೇಶ್ವರ ತೋರಿದ ಧೈರ್ಯ ಸ್ಮರಣೀಯ ಎಂದರು.
ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಂ. ಗುರುಸಿದ್ದನ ಗೌಡ ಮಾತನಾಡಿ, ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಹಿತಕ್ಕಾಗಿ ಸೇವೆ ಸಲ್ಲಿಸಿದವರು ತಿಪ್ಪೇಸ್ವಾಮಿ. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ರಾಜ್ಯಾದ್ಯಂತ ಹೆಸರು ಮಾಡಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಇವರ ಸೇವೆ ಸದಾ ಮುಂದುವರಿಯಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಎಂ. ಗುರುಸಿದ್ದನ ಗೌಡ ಅವರ ಹುಟ್ಟುಹಬ್ಬ ಆಚರಿಸಲಾಯಿತು.
ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸುನೀಲ್ ಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎಸ್. ಗಿರೀಶ್, ಕಾರ್ಯದರ್ಶಿ ಮಠಪತಿ ಮಂಜುನಾಥ, ಉಪಾಧ್ಯಕ್ಷ ಸೋಮಶೇಖರ್ ಗೌಡ, ಖಜಾಂಜಿ ಮರುಳಸಿದ್ದಪ್ಪ, ನಿರ್ದೇಶಕರಾದ ಅಂಬಿಕಾ, ಟಿ. ಮಂಜುಳಾ, ಕೆ.ಎಚ್.ಎಂ. ಶೈಲಜಾ, ಪ್ರತಿಭಾ, ನಂದಿ ಬಸವರಾಜ, ಬಣಕಾರ ಮೂಗಪ್ಪ, ಶಿವರಾಜ್ ಪಾಲ್ತೂರ್ ಉಪಸ್ಥಿತರಿದ್ದರು.