ಬಳ್ಳಾರಿಯ ರೇಣುಕಾನಗರದ ಮನೆಯೊಂದರಲ್ಲಿ ವರಮಹಾಲಕ್ಷ್ಮೀ ಹಬ್ಬದ ಹಿನ್ನಲೆ ಲಕ್ಷ್ಮೀಯ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. 
ಬಳ್ಳಾರಿ

ಜಿಲ್ಲಾದ್ಯಂತ ಕಳೆಗಟ್ಟಿದ ವರಮಹಾಲಕ್ಷ್ಮೀ ಪೂಜೆ

ಪ್ರಮುಖ ಮುಖ್ಯಾಂಶಗಳು

  • ಸುಖ-ಸಮೃದ್ಧಿಗಾಗಿ ಪ್ರಾರ್ಥನೆ

ಬಳ್ಳಾರಿ :

ಶ್ರಾವಣ ಮಾಸದ ಪ್ರಮುಖ ಹಬ್ಬವಾದ ವರಮಹಾಲಕ್ಷ್ಮೀ ಹಬ್ಬವನ್ನು ನಗರ ಸೇರಿದಂತೆ ಜಿಲ್ಲಾದ್ಯಂತ ಶುಕ್ರವಾರ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಮನೆಮನೆಗಳಲ್ಲಿ ಮುತ್ತೈದೆಯರು ಲಕ್ಷ್ಮೀ ದೇವಿ ಪ್ರತಿಷ್ಠಾಪಿಸಿ, ಕುಟುಂಬದ ಸುಖ, ಶಾಂತಿ ಮತ್ತು ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬೆಳಗಿನ ಜಾವದಿಂದಲೇ ಹಬ್ಬದ ಸಡಗರ ಮನೆಮಾಡಿದ್ದು, ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಮನೆಯ ಅಂಗಳದಲ್ಲಿ ರಂಗೋಲಿ, ಮಾವಿನ ತೋರಣ ಹಾಗೂ ಬಾಳೆಕಂದುಗಳಿಂದ ಅಲಂಕರಿಸಿದ್ದರು. ಪೂಜಾ ಕೊಠಡಿಯಲ್ಲಿ ಕಳಶಕ್ಕೆ ಸೀರೆ ಉಡಿಸಿ, ಚಿನ್ನಾಭರಣ ಹಾಗೂ ವಿವಿಧ ಬಗೆಯ ನಲ್ಪುಷ್ಪಗಳಿಂದ ಲಕ್ಷ್ಮೀ ದೇವಿಯ ರೂಪ ನೀಡಿ ಭಕ್ತಿಯಿಂದ ಪೂಜಿಸಿದರು.

ನಗರದ ವಿವಿಧ ಬಡಾವಣೆಗಳಲ್ಲಿ ಮುತ್ತೈದೆಯರು ವ್ರತಾಚರಣೆ ನಡೆಸಿ, ದೇವಿಗೆ ಬಗೆಬಗೆಯ ನೈವೇದ್ಯ ಅರ್ಪಿಸಿದರು. ಪೂಜೆಯ ನಂತರ ಪರಸ್ಪರ ಮನೆಗಳಿಗೆ ತೆರಳಿ ಅರಿಶಿನ-ಕುಂಕುಮ, ತಾಂಬೂಲ ವಿನಿಮಯ ಮಾಡಿಕೊಂಡು ಶುಭ ಕೋರಿದರು. ಹಬ್ಬದ ಹಿನ್ನಲೆಯಲ್ಲಿ ಗುರುವಾರದಿಂದಲೇ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಪೂಜಾ ಸಾಮಗ್ರಿ ಹಾಗೂ ಬಳೆಗಳ ಖರೀದಿಗೆ ಜನಸಂದಣಿ ಅತಿಯಾಗಿತ್ತು.

ಉತ್ತಮ ಮಳೆ-ಬೆಳೆಯಾಗಿ ನಾಡು ಧನ-ಧಾನ್ಯಗಳಿಂದ ಸಮೃದ್ಧಿಯಾಗಲಿ ಎಂದು ಪೂಜೆಯ ವೇಳೆ ಪ್ರಾರ್ಥಿಸಲಾಯಿತು. ಬಂಧು-ಬಳಗದವರನ್ನು ಮನೆಗೆ ಆಹ್ವಾನಿಸಿ ಹಬ್ಬದ ಸಿಹಿ ವಿನಿಮಯ ಮಾಡಿಕೊಳ್ಳುವ ಮೂಲಕ ಭಕ್ತಿ ಮತ್ತು ಸಾಂಪ್ರದಾಯಿಕ ವಾತಾವರಣ ಕಳೆಗಟ್ಟಿತ್ತು.