ಹೊಸಪೇಟೆಯಲ್ಲಿ ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಬಾಳೆದಿಂಡು ಖರೀದಿಸಿದ ಮಹಿಳೆಯರು. 
ಬಳ್ಳಾರಿ

ವರಮಹಾಲಕ್ಷ್ಮೀ ಹಿನ್ನೆಲೆ ಬೆಲೆ ಗಗನಕ್ಕೆ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಖರೀದಿ
  • ಮಗಿಬಿದ್ದ
  • ಮಹಿಳೆಯರು
ಹೊಸಪೇಟೆ:

ಹಬ್ಬಗಳ ಸಾಲು ಆರಂಭವಾಗುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಗಗನಕ್ಕೇರಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಶ್ರಾವಣ ಮಾಸ ಹಾಗೂ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವಿನ ಬೇಡಿಕೆ ದಿಢೀರ್ ಹೆಚ್ಚಾಗಿದ್ದು, ಬಹುತೇಕ ಹೂವುಗಳ ಬೆಲೆ ಮೂರರಿಂದ ಐದು ಪಟ್ಟು ಏರಿಕೆಯಾಗಿದೆ.

ಸಾಮಾನ್ಯ ದಿನಗಳಲ್ಲಿ ಕೆ.ಜಿ.ಗೆ 400 ರೂ.ಗೆ ಸಿಗುತ್ತಿದ್ದ ಕನಕಾಂಬರ, ಇದೀಗ 2ಸಾವಿರ ರೂ.ಗೆ ಏರಿಕೆಯಾಗಿದೆ. 200 ರೂ.ಇದ್ದ ಮಲ್ಲಿಗೆ ಹೂವು 800 ರೂ.ಗೆ ಮಾರಾಟವಾಗುತ್ತಿದೆ. 250ರೂ.ಇದ್ದ ಕಾಕಡ ಸಾವಿರ ರೂ.ಗಡಿ ತಲುಪಿದೆ.
ಅಲಂಕಾರಕ್ಕೆ ಅತಿ ಹೆಚ್ಚು ಬಳಕೆಯಾಗುವ ಸುಗಂಧರಾಜ 100 ರೂ.ಯಿಂದ 360 ರೂ., ಗುಲಾಬಿ ಹೂ160ರೂ.ಯಿಂದ 400 ರೂ.ಗೆ ಏರಿಕೆಯಾಗಿದೆ. ಸೆವಂತಿಗೆ ಒಂದು ಮಾರಿಗೆ 80ರೂ.ಯಿಂದ 200 ರೂ.ತಲುಪಿದ್ದು, 60 ರೂ. ಇದ್ದ ಚೆಂಡು ಹೂ 120 ರೂ.ತಲುಪಿದೆ. ತುಳಸಿ ಹಾರದ ಬೆಲೆ 80ರೂ.ಯಿಂದ 200 ರೂ.ಗೆ ಹಾಗೂ 50ರೂ. ಹಾರಗಳು 150ರೂ.ಗೆ ಮಾರಾಟವಾದವು.
ಹಬ್ಬದ ಹಿನ್ನೆಲೆ ಹೂವಿನ ಬೇಡಿಕೆ ಹೆಚ್ಚಿದ್ದು ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಹೂ ಬಾರದಿರುವುದೇ ಈ ದಿಢೀರ್ ದರ ಏರಿಕೆಗೆ ಪ್ರಮುಖ ಕಾರಣ ಎಂದು ವ್ಯಾಪಾರಿಗಳು ತಿಳಿಸಿದರು.
ಹಣ್ಣುಗಳ ಬೆಲೆಯೂ ಏರಿಕೆ
ಹೂವಿನ ಬೆನ್ನಲ್ಲೇ ಹಣ್ಣುಗಳ ದರದಲ್ಲೂ ಭಾರಿ ಏರಿಕೆ ಕಂಡುಬಂದಿದೆ. ಮಾರುಕಟ್ಟೆಯಲ್ಲಿ ಸೇಬು ಕೆ.ಜಿ.ಗೆ 250 ರೂ., ಸೀಬೆಹಣ್ಣು 140 ರೂ., ದಾಳಿಂಬೆ 160 ರೂ. ರಿಂದ 220 ರೂ. ಹಾಗೂ ಮೂಸಂಬಿ 130ರವರೆಗೆ ಮಾರಾಟವಾಗುತ್ತಿದೆ. ಪೂಜೆಗೆ ಪ್ರಮುಖವಾದ ಏಲಕ್ಕಿ ಬಾಳೆಹಣ್ಣು ಡಜನ್‌ಗೆ 20ರಿಂದ 60ಕ್ಕೆ ತಲುಪಿದೆ.
ಹೆಚ್ಚಿನ ಬೆಲೆಗೆ ಸಾಮಗ್ರಿ ಖರೀದಿ
ಬೆಲೆ ಏರಿಕೆಯ ಬಿಸಿಯ ನಡುವೆಯೂ ಸಿರಿದೇವಿಯ ಸ್ವಾಗತಕ್ಕೆ ಸಿದ್ಧತೆಗಳು ಜೋರಾಗಿವೆ. ಮಹಿಳೆಯರು ಮನೆಗಳನ್ನು ತಳಿರು-ತೋರಣಗಳಿಂದ ಸಿಂಗರಿಸಿ, ಲಕ್ಷ್ಮೀ ಮುಖವಾಡ, ಕಳಶ, ಪೂಜಾದ್ರವ್ಯಗಳು ಹಾಗೂ ವಸ್ತ್ರಗಳ ಖರೀದಿಯಲ್ಲಿ ತೊಡಗಿದ್ದಾರೆ. ದರ ದುಬಾರಿಯಾಗಿದ್ದರೂ ಧನ-ಧಾನ್ಯ ಪ್ರದಾಯಿನಿ ಮಹಾಲಕ್ಷ್ಮೀಯನ್ನು ಬರಮಾಡಿಕೊಳ್ಳಲು ಜನರು ಅನಿವಾರ್ಯವಾಗಿ ಹೆಚ್ಚಿನ ಹಣ ನೀಡಿ ಪೂಜಾ ಸಾಮಗ್ರಿಗಳನ್ನು ಖರೀದಿಸುತ್ತಿರುವುದು ಕಂಡು ಬಂತು.