ಬಳ್ಳಾರಿಯ ಎಸ್ಪಿ ವೃತ್ತದಲ್ಲಿ ವಾಲ್ಮೀಕಿ ಪುತ್ಥಳಿಯ ಮೆರವಣಿಗೆಯಲ್ಲಿ ಮಹಿಳೆಯರು ಕುಣಿದು, ಜೆಸಿಬಿ ಮೂಲಕ ಹೂ ಚೆಲ್ಲಿದರು. 
ಬಳ್ಳಾರಿ

ವಾಲ್ಮೀಕಿ ಪುತ್ಥಳಿ ಮೆರವಣಿಗೆ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಅನಾವರಣ
  • ಮೆರವಣಿಗೆ
  • ಮೆರುಗು
ಬಳ್ಳಾರಿ : ಇಲ್ಲಿನ ಎಸ್ಪಿ ವೃತ್ತದಲ್ಲಿ ಅನಾವರಣಗೊಳಿಸಲು ಉದ್ದೇಶಿಸಿರುವ ವಾಲ್ಮೀಕಿ ಪುತ್ಥಳಿಯನ್ನು ಶಾಸಕ ನಾರಾ ಭರತರೆಡ್ಡಿ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಭವ್ಯವಾಗಿ ಸ್ವಾಗತಿಸಲಾಯಿತು.
ನಗರದ ಶ್ರೀಕೋಟೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಿಂದ ಎಸ್ಪಿ ವೃತದವರೆಗೆ 1001 ಮಹಿಳೆಯರು ಪೂರ್ಣಕುಂಭ ಕಳಸದೊಂದಿಗೆ ಹಾಗೂ ಸಮಾಜದ ಮುಖಂಡರ ಸಮ್ಮುಖದಲ್ಲಿ ಪುತ್ಥಳಿಯ ಮೆರವಣಿಗೆಯ ನಡೆಯಿತು. ಶ್ರೀರಾಮ , ಆಂಜನೇಯ ವೇಷಭೂಷಣ ಧರಿಸಿದ ಕೆಲ ಯುವಕರು ಮೆರವಣಿಗೆಯಲ್ಲಿ ಗಮನ ಸೆಳೆದರು. ಡೊಳ್ಳು ಕುಣಿತ, ವಾದ್ಯಮೇಳ, ಜನಪದ ಕಲಾವಿದರ ಪ್ರದರ್ಶನಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ಪುತ್ಥಳಿಗೆ ಜೆಸಿಬಿ ಮೂಲಕ ಹೂ ಚೆಲ್ಲಿ ಸಂಭ್ರಮಿಸಿದರು. ವಾಲ್ಮೀಕಿ ಮಹರ್ಷಿಯ ಭಾವಚಿತ್ರಗಳು, ಬ್ಯಾನರ್‌ಗಳು ಮತ್ತು ಘೋಷಣೆಗಳೊಂದಿಗೆ ಸಾಗಿದ ಮೆರವಣಿಗೆ ನಗರದೆಲ್ಲೆಡೆ ಗಮನ ಸೆಳೆಯಿತು. ನಗರದ ನಾನಾ ಕಡೆಯಿಂದ ಆಗಮಿಸಿದ್ದ ಮಹಿಳೆಯರು ಹಾಗೂ ಯುವತಿಯರು ಗುಲಾಬಿ, ಹಳದಿ ಬಣ್ಣದ ಸೀರೆಯುಟ್ಟು ಮೆರವಣಿಗೆಯಲ್ಲಿ ಪಾಲ್ಗೂಂಡರು.
ಬಳಿಕ ನಾರಾ ಭರತರೆಡ್ಡಿ ಮಾತನಾಡಿ, ಸಚಿವ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಖಾನ್, ಮಾಜಿ ಸಚಿವ ಕೆ.ಎನ್.ರಾಜಣ್ಣ, ಶಾಸಕರಾದ ಬಿ.ನಾಗೇಂದ್ರ, ಜೆ.ಎನ್.ಗಣೇಶ, ಬಿ.ಎಂ.ನಾಗರಾಜ ಸೇರಿದಂತೆ ರಾಜ್ಯದಲ್ಲಿನ ವಾಲ್ಮೀಕಿ ಸಮಾಜದ ಎಲ್ಲ ಶಾಸಕರು ಜ.3ರಂದು ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಈ ಪುತ್ಥಳಿಯನ್ನು ಆಯೋಧ್ಯೆ ಶ್ರೀರಾಮ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಅವರ ಮೂಲಕ ಕೆತ್ತಿಸಲಾಗಿದೆ. ವೈಯಕ್ತಿಕವಾಗಿ ಮೂರ್ತಿಗೆ 1.18 ಕೋಟಿ ರೂ. ಹಣ ನೀಡಿರುವೆ. ಸಮಾಜದ ಹಾಗೂ ಒಳ್ಳೆಯ ಕೆಲಸಕ್ಕೆ ಸದಾ ಕಾಲ ಕಾರ್ಯ ನಿರ್ವಹಿಸುವೆ ಎಂದರು.