ಹೂವಿನಹಡಡಗಲಿಯಲ್ಲಿ ಯಮನೂರು ಸ್ವಾಮಿ ಉರುಸ್ ಕಾರ್ಯಕ್ರಮದಲ್ಲಿ ವಂಶಪಾರಂಪರ್ಯ ಮುಜಾವರರು ನೀರಿನಿಂದ ದೀಪ ಬೆಳಗಿಸುವ ಪವಾಡ ಮಾಡಿದರು.
ಹೂವಿನಹಡಗಲಿ: ಪಟ್ಟಣದ ಯಮನೂರು ಸ್ವಾಮಿ (ಹಜರತ್ ರಾಜಾಬಾಗ್ ಸವಾರ್) ಉರುಸ್ ಶನಿವಾರ ಮತ್ತು ಭಾನುವಾರ ಅದ್ದೂರಿಯಾಗಿ ಜರುಗಿತು.
ವಂಶಪಾರಂಪರ್ಯ ಮುಜಾವರರು ಭಾನುವಾರ ಬೆಳಗ್ಗೆ ನೀರಿನಿಂದ ದೀಪ ಬೆಳಗಿಸುವ ಪವಾಡ ಮಾಡಿದರು. ಇದನ್ನು ನೋಡಲು ಸುತ್ತಲಿನ ಗ್ರಾಮಸ್ಥರು ಶನಿವಾರ ರಾತ್ರಿಯಿಂದಲೇ ದರ್ಗಾದ ಆವರಣದಲ್ಲಿ ಕುಳಿತಿದ್ದರು. ಹಿಂದೂ-ಮುಸ್ಲಿಮರು ಭಾವೈಕ್ಯದಿಂದ ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ಖಾದ್ಯಗಳನ್ನು ವಿನಿಮಯ ಮಾಡಿಕೊಂಡರು. ಶನಿವಾರ ರಾತ್ರಿ ವಿವಿಧ ಮಠಾಧೀಶರು ಹಾಗೂ ಮೌಲವಿಗಳ ಮೆರವಣಿಗೆ ನಡೆಸಲಾಯಿತು.
ಶಾಸಕ ಕೃಷ್ಣನಾಯ್ಕ ಗಂಧ ಮಹೋತ್ಸವಕ್ಕೆ ಚಾಲನೆ ನೀಡಿದರು. ಬಸವಕಲ್ಯಾಣದ ಹಜರತ್ ಖಾಜಾ ಜಿಯಾ ಉಲ್ ಹಸನ್ ಜಾಗೀರದಾರ್ ಚಿಶ್ತಿ, ಶಾಖಾ ಗವಿಮಠ ಡಾ.ಹಿರಿಶಾಂತವೀರ ಸ್ವಾಮೀಜಿ, ಶ್ರೀ ರಾಮದೇವಸ್ಥಾನದ ಧರ್ಮಕರ್ತ ರಾಕೇಶಯ್ಯ ರಾಮಸ್ವಾಮಿ, ಚೌಕಿಮಠದ ಗಾಡಿತಾತ, ಬೆಳಗಟ್ಟಿಯ ಸೈಯದ್ ಷಾ ಅನ್ವರ್ ಬಾಷಾ, ಸೈಯದ್ ಷಾ ಮುಸ್ತಫಾ ಖಾದ್ರಿ ಇತರರಿದ್ದರು.