ಬಳ್ಳಾರಿಯ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪಥ ಸಂಚಲನ ನಡೆಯಿತು.
ಬಳ್ಳಾರಿ : ಪೊಲೀಸ್ ಇಲಾಖೆಯು ತನ್ನ ಸಿಬ್ಬಂದಿ ಮತ್ತು ನಿವೃತ್ತ ಅಧಿಕಾರಿಗಳ ಕ್ಷೇಮಾಭಿವೃದ್ಧಿಗೆ ಹೆಚ್ಚಿನ ಅದ್ಯತೆ ನೀಡಿದೆ ಎಂದು ಎಎಸ್ಪಿ ಎಸ್.ನವೀನ್ ಕುಮಾರ್ ಹೇಳಿದರು.
ನಗರದ ಪೊಲೀಸ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರ್ತವ್ಯದ ಅವಧಿಯಲ್ಲಿ ಮರಣ ಹೊಂದಿದ ಅಧಿಕಾರಿ ಹಾಗೂ ಮೃತ ನಿವೃತ್ತ ಅಧಿಕಾರಿಗಳ ಕುಟುಂಬಗಳಿಗೆ ನಗದು, ನಿವೃತ್ತ ಅಧಿಕಾರಿಗಳ ಆರೋಗ್ಯ ರಕ್ಷಣೆಗಾಗಿ ವೈದ್ಯಕೀಯ ಚಿಕಿತ್ಸಾ ಧನ ವಿತರಿಸಲಾಗಿದೆ ಎಂದರು.
ಧ್ವಜ ದಿನಾಚರಣೆಯ ಮೂಲಕ ಸಂಗ್ರಹವಾಗುವ ಮೊತ್ತವನ್ನು ಶೇ. 50 ರಷ್ಟು ರಾಜ್ಯ ನಿವೃತ್ತ ಅಧಿಕಾರಿಗಳ ಕಲ್ಯಾಣ ನಿಧಿಗೆ ಮತ್ತು ಉಳಿದ ಶೇ.50 ರಷ್ಟು ಕೇಂದ್ರ ನಿಧಿಗೆ ಕಳುಹಿಸಲಾಗುತ್ತದೆ. ರಾಜ್ಯಕ್ಕೆ ಲಭಿಸುವ ಈ ಶೇ.50 ರಷ್ಟು ಹಣವನ್ನು ಪೊಲೀಸರ ಮತ್ತು ಅವರ ಕುಟುಂಬದ ವೈದ್ಯಕೀಯ ಸೌಲಭ್ಯ ಹಾಗೂ ತುರ್ತು ಆರ್ಥಿಕ ಸಹಾಯಕ್ಕಾಗಿ ವಿನಿಯೋಗಿಸಲಾಗುತ್ತದೆ. ಪೊಲೀಸ್ ಇಲಾಖೆಯ ಘನತೆ ಎತ್ತಿಹಿಡಿದು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಉತ್ತಮ ಸೇವೆ ಮುಂದುವರಿಸುವಂತೆ ಅಧಿಕಾರಿಗಳಿಗೆ ಕರೆ ನೀಡಿದರು.
ನಿವೃತ್ತ ಪಿಎಸ್‌ಐ ಎಂ. ಶ್ರೀನಿವಾಸಲು ಮಾತನಾಡಿ, ಸೇವಾವಧಿಯಲ್ಲಿ ಎದುರಾದ ಕ್ಲಿಷ್ಟ ಪರಿಸ್ಥಿತಿ ಮತ್ತು ಕಠಿಣ ಪ್ರಕರಣಗಳ ತನಿಖೆಯಲ್ಲಿ ಮೇಲಾಧಿಕಾರಿಗಳ ಮಾರ್ಗದರ್ಶನ ಹಾಗೂ ಪೊಲೀಸ್ ಇಲಾಖೆ ನೀಡಿದ ಶಕ್ತಿಯಿಂದ ಸೇವೆ ತೃಪ್ತಿ ನೀಡಿದೆ ಎಂದರು.
ನಿವೃತ್ತಿಯ ನಂತರವೂ ಸಿಗುವ ಆರೋಗ್ಯ ಭಾಗ್ಯ ಯೋಜನೆ, ಪೊಲೀಸ್ ಕ್ಯಾಂಟೀನ್ ಮತ್ತು ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯಗಳು ಅನುಕೂಲಕರವಾಗಿದ್ದು, ನಿವೃತ್ತ ಸಿಬ್ಬಂದಿಗೆ ಇಲಾಖೆಯಿಂದ ಬರಬೇಕಾದ ಸೌಲಭ್ಯಗಳು ವಿಳಂಬವಿಲ್ಲದೆ ತಲುಪುವಂತಾಗಬೇಕು ಎಂದರು.
ಜಿಲ್ಲಾ ಡಿಎಆರ್ ಡಿಎಸ್ಪಿ ತಿಪ್ಪೇಸ್ವಾಮಿ ಮಾತನಾಡಿ, ಸೇನಾಪಡೆಯು ಕೇವಲ ಯುದ್ಧದ ಸಮಯದಲ್ಲಿ ಹೋರಾಡಿದರೆ, ಪೊಲೀಸ್ ಇಲಾಖೆಯು ಪ್ರತಿದಿನ ಹತ್ತು ಹಲವಾರು ಕಷ್ಟಕರ ಸನ್ನಿವೇಶಗಳನ್ನು ಎದುರಿಸಿ ಸಮಾಜದ ರಕ್ಷಣೆಗೆ ಶ್ರಮಿಸುತ್ತದೆ ಎಂದು ಸ್ಮರಿಸಿದರು.
2025 ರ ಏ.1 ರಿಂದ 2026 ರ ಮಾ.31 ಅವಧಿಯಲ್ಲಿ ಜಿಲ್ಲೆಯ ಒಟ್ಟು 27 ಪೊಲೀಸ್ ಮತ್ತು ಸಿಬ್ಬಂದಿ ನಿವೃತ್ತರಾಗಿದ್ದಾರೆ. ಅವರಲ್ಲಿ 7 ಜನ ಪಿಎಸ್‌ಐ, ಇಬ್ಬರು ಆರ್‌ಎಸ್‌ಐ, 13 ಜನ ಎಎಸ್‌ಐ, ಮೂವರು ಎಆರ್‌ಎಸ್‌ಐ ಹಾಗೂ ಇಬ್ಬರು ಪೇದೆ ಸೇರಿದ್ದಾರೆ. 2025-26ನೇ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಒಟ್ಟು 160 ಪೊಲೀಸ್ ಅಧಿಕಾರಿಗಳಿಗೆ ತಲಾ 1 ಲಕ್ಷ ರೂ. ನಗದು ಬಹುಮಾನ ವಿತರಿಸಲಾಗಿದೆ ಎಂದು ಮಾಹಿತಿ ವಿವರಿಸಿದರು. ಕಾರ್ಯಕ್ರಮದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ನಂತರ ಪೊಲೀಸ್ ಧ್ವಜಗಳ ವಿತರಿಸಲಾಯಿತು.