ಇಂಜನಿಯರ್‌ಗಳು ಲೋಕಾಯುಕ್ತ ಬಲೆಗೆ 
ಬಳ್ಳಾರಿ

ಇಬ್ಬರು ಇಂಜನಿಯರ್‌ಗಳು ಲೋಕಾಯುಕ್ತ ಬಲೆಗೆ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಅಂದಾಜು ಪಟ್ಟಿಗೆ ಅನುಮೋದನೆಗೆ ಲಂಚ ಬೇಡಿಕೆ
  • ಲೋಕಾಯುಕ್ತ ಪೊಲೀಸರಿಗೆ ದೂರು
ಬಳ್ಳಾರಿ : ಖಾಸಗಿ ಬಡಾವಣೆಯೊಂದಕ್ಕೆ ನೀರು ಮತ್ತು ಒಳಚರಂಡಿ ವ್ಯವಸ್ಥೆಯ ಅಂದಾಜು ಪಟ್ಟಿಗೆ ಅನುಮೋದನೆಗೆ ಲಂಚ ಬೇಡಿಕೆಯಿಟ್ಟಿದ್ದ ಇಬ್ಬರು ಇಂಜನಿಯರ್‌ಗಳು ಲೋಕಾಯುಕ್ತ ಬಲೆಗೆ ಬಿದ್ದದ್ದಾರೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ (ಕೆಯುಡಬ್ಲೂೃಎಸ್‌ಡಿಬಿ) ಮಂಡಳಿಯ ಸಹಾಯಕ ಇಂಜಿನಿಯರ್ (ಎಇ)ಅಶೋಕ್ ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್(ಇಇ) ಕಾಶಿನಾಥ್ ಲೋಕಾಯುಕ್ತ ಅಧಿಕಾರಿಗಳಿಂದ ಬಂಧನಕ್ಕೊಳಗಾದರು.
ನಗರದ ರಾಘವೇಂದ್ರ ಕಾಲನಿಯ ಎರಡನೇ ಹಂತದ ಬಳಿ ಇರುವ 2.47 ಎಕರೆಯ ಖಾಸಗಿ ಬಡಾವಣೆಗೆ ನೀರು ಮತ್ತು ಒಳಚರಂಡಿ ಸಂಪರ್ಕದ ಎಸ್ಟಿಮೇಟ್ ಮಂಜೂರು ಮಾಡಲು ಸಹಾಯಕ ಇಂಜಿನಿಯರ್ ಅಶೋಕ್, ದೂರುದಾರ ವೀರೇಶ್ ಎಂಬುವವರ ಬಳಿ ಮೊದಲು 75 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಮಾತುಕತೆ ನಡೆಸಿ 55 ಸಾವಿರ ರೂ.ಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ವೀರೇಶ್ ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಕಚೇರಿಯಲ್ಲಿ ವೀರೇಶ್ ಅವರಿಂದ ಅಶೋಕ್ 55 ಸಾವಿರ ರೂ. ನಗದು ಸ್ವೀಕರಿಸಿದ್ದರು. ಪಡೆದ ಹಣವನ್ನು ಅಶೋಕ್ ಮೇಲಧಿಕಾರಿಯಾದ ಇಇ ಕಾಶಿನಾಥ್ ಅವರಿಗೆ ಪಾಲಿನ ಹಣವನ್ನು ಹಂಚಿಕೆ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಇಬ್ಬರನ್ನೂ ಲಂಚದ ಹಣದ ಸಮೇತ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.