ಬಳ್ಳಾರಿಯ ದುರ್ಗಮ್ಮ ದೇವಸ್ಥಾನದ ವೃತ್ತದಿಂದ ಸಿರಗುಪ್ಪ ರಸ್ತೆ ಕಡೆ ಸಂಚರಿಸುತ್ತಿರುವ ವಾಹನಗಳು. 
ಬಳ್ಳಾರಿ

ಟ್ರಾಫಿಕ್ ಸಿಗ್ನಲ್‌ಗಳೇ ಸವಾರರಿಗೆ ಶಾಪ

ಪ್ರಮುಖ ಮುಖ್ಯಾಂಶಗಳು

  • ಟ್ರಾಫಿಕ್
ಬಳ್ಳಾರಿ : ಗಣಿನಾಡಿನಲ್ಲಿ ಸೂರ್ಯನ ಪ್ರತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅಕ್ಷರಶಃ ಬೆಂಕಿಯ ಉಂಡೆಯಂತಾಗಿರುವ ರಣಬಿಸಿಲಿಗೆ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ನಗರದ ಪ್ರಮುಖ ವೃತ್ತಗಳಲ್ಲಿನ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್‌ಗಳು ಸವಾರರ ತಾಳ್ಮೆ ಪರೀಕ್ಷಿಸುತ್ತಿದ್ದು, ಬಿಸಿಲಿನ ಬೇಗೆಯಲ್ಲೇ ಕಾಯುವ ದುಸ್ಥಿತಿ ನಿರ್ಮಾಣವಾಗಿದೆ.
ನಾಲ್ಕರಲ್ಲಿ ಎರಡೇ ಚಾಲ್ತಿ : ನಗರದ ಸಂಚಾರ ನಿಯಂತ್ರಣಕ್ಕಾಗಿ ಅಳವಡಿಸಲಾಗಿರುವ ನಾಲ್ಕು ಪ್ರಮುಖ ಟ್ರಾಫಿಕ್ ಸಿಗ್ನಲ್‌ಗಳ ಪೈಕಿ ಕೇವಲ ದುರ್ಗಮ್ಮ ದೇವಸ್ಥಾನ ಹಾಗೂ ಸಂಗಮ್ ವೃತ್ತದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇನ್ನೂ ಗಡಗಿ ಚನ್ನಪ್ಪ ವೃತ್ತದಲ್ಲಿ ಕ್ಲಾಕ್ ಟವರ್ ಹಾಗೂ ಸುಧಾಕ್ರಾಸ್‌ನಲ್ಲಿ ರೈಲ್ವೆ ಮೇಲಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಸಿಗ್ನಲ್ ಸ್ಥಗಿತಗೊಳಿಸಲಾಗಿದೆ.
122 ಸೆಕೆಂಡ್ ಕಾಯುವ ಶಿಕ್ಷೆ : ನಗರದ ನಾನಾ ವೃತ್ತಗಳಲ್ಲಿ ಬೆಳಗ್ಗೆ 11 ರಿಂದ ಸಂಜೆ 4ರವರೆಗೆ ವಾಹನ ಸಂಚಾರ ದಟ್ಟಣೆಯಿಂದ ಕೂಡಿರುತ್ತಿದೆ. ಇಲ್ಲಿನ ದುರ್ಗಮ್ಮ ವೃತ್ತದಲ್ಲಿ ವೃತ್ತದಿಂದ ಗಡಗಿ ಚನ್ನಪ್ಪ ವೃತ್ತದ ಕಡೆಗೆ ಸಂಚರಿಸುವ ರಸ್ತೆಯ ಸಿಗ್ನಲ್ ಸಮಯವನ್ನು 90 ಸೆಕೆಂಡ್‌ನಿಂದ 122 ಸೆಕೆಂಡ್ಸ್‌ಗೆ ಹೆಚ್ಚಿಸಲಾಗಿದೆ. ಇನ್ನೂ ಇದೇ ವೃತ್ತದಿಂದ ಮೋಕಾ ಹಾಗೂ ಸಿರಗುಪ್ಪ ರಸ್ತೆ ಕಡೆ ಸಂಚಾರಿಸುವ ಸಿಗ್ನಲ್‌ಗಳಿಗೆ 60 ಸೆಕೆಂಡ್ಸ್ ಕಾಯಬೇಕು. ಇದರಿಂದ, ನೆತ್ತಿ ಸುಡುವ ಬಿಸಿಲಿನಲ್ಲಿ ಎರಡು ನಿಮಿಷಗಳ ಕಾಲ ಬೈಕ್ ಸವಾರರು ನಿಲ್ಲುವುದು ನರಕಯಾತನೆಯಾಗಿ ಪರಿಣಮಿಸಿದೆ. ಮಹಾನಗರ ಪಾಲಿಕೆಯು ಸವಾರರ ಹಿತದೃಷ್ಟಿಯಿಂದ ಹಸಿರು ಹೊದಿಕೆ (ಗ್ರೀನ್ ಮ್ಯಾಟ್) ಅಳವಡಿಸಿದೆಯಾದರೂ, ಅದು ಎಲ್ಲ ಸವಾರರಿಗೆ ಆಶ್ರಯ ನೀಡಲು ಸಾಕಾಗುತ್ತಿಲ್ಲ. ಸ್ಥಳದ ಅಭಾವದಿಂದಾಗಿ ಅರ್ಧದಷ್ಟು ಸವಾರರು ಬಿಸಿಲಿನಲ್ಲಿಯೇ ಕಾಯಬೇಕಿದೆ. ಇತ್ತ ಸಂಗಮ್ ವೃತ್ತದಲ್ಲಿ ನಾಲ್ಕು ಕಡೆ ಸಿಗ್ನಲ್ ಅಳವಡಿಸಲಾಗಿದೆಯಾದರೂ, ಅದು ಯಾವುದೇ ವೈಜ್ಞಾನಿಕ ಮಾನದಂಡಗಳನ್ನು ಹೊಂದಿಲ್ಲ ಎಂಬುದು ಸಾರ್ವಜನಿಕರ ದೂರು. ಸಿಗ್ನಲ್‌ಗಳ ಅಸಮರ್ಪಕ ನಿರ್ವಹಣೆಯಿಂದಾಗಿ ವಾಹನ ಸವಾರರು ಹೈರಾಣಾಗುತ್ತಿದ್ದಾರೆ. ಕೆಲವೊಮ್ಮೆ ಸಿಗ್ನಲ್‌ಗಳು ಇದ್ದಕ್ಕಿದ್ದಂತೆ ಸ್ಥಗಿತಗೊಳ್ಳುವುದರಿಂದ ವಾಹನಗಳು ಅಡ್ಡಾದಿಡ್ಡಿ ಸಂಚರಿಸಿ ಅಪಘಾತಗಳು ಸಂಭವಿಸುವ ಭೀತಿ ಎದುರಾಗಿದೆ.
ಸಿಗ್ನಲ್ ಅಳವಡಿಕೆಯಿಲ್ಲ : ನಗರದ ಕಥೆ ಹೀಗಿದ್ದರೆ, ಜಿಲ್ಲೆಯ ಇತರ ಪ್ರಮುಖ ತಾಲೂಕುಗಳಾದ ಕಂಪ್ಲಿ, ಕುರುಗೋಡು ಮತ್ತು ಸಿರಗುಪ್ಪಗಳಲ್ಲಿ ಪರಿಸ್ಥಿತಿ ಇನ್ನೂ ಭಿನ್ನವಾಗಿಲ್ಲ. ಈ ಪಟ್ಟಣಗಳ ಯಾವುದೇ ಪ್ರಮುಖ ವೃತ್ತಗಳಲ್ಲಿ ಇದುವರೆಗೂ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಕಾರ್ಯಕ್ಕೆ ಆಡಳಿತ ಮುಂದಾಗಿಲ್ಲ. ಇದರಿಂದಾಗಿ ಅಲ್ಲಿನ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಸಮಯ ಕಡಿತ: ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ಸಿಗ್ನಲ್ ಕಾಯುವ ಸಮಯವನ್ನು ತಕ್ಷಣವೇ ಕಡಿಮೆ ಮಾಡಬೇಕು. ಟ್ರಾಫಿಕ್ ಸಿಗ್ನಲ್‌ಗಳನ್ನು ತಾಂತ್ರಿಕವಾಗಿ ಸರಿಪಡಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಸಿಗ್ನಲ್ ಬಳಿ ಹೆಚ್ಚಿನ ಸವಾರರಿಗೆ ನೆರಳು ಸಿಗುವಂತೆ ಹಸಿರು ಹೊದಿಕೆ ವಿಸ್ತರಿಸಬೇಕು. ಒಟ್ಟಾರೆಯಾಗಿ, ಒಂದು ಕಡೆ ಬಿಸಿಲು ಸುಡುತ್ತಿದ್ದರೆ, ಇನ್ನೊಂದೆಡೆ ವ್ಯವಸ್ಥೆಯ ಅವೈಜ್ಞಾನಿಕ ನಿರ್ಧಾರಗಳು ಜಿಲ್ಲೆಯ ಜನರನ್ನು ಹೈರಾಣಾಗಿಸಿವೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.
ಕೋಟ್... ನಗರದ ದುರ್ಗಮ್ಮ ದೇವಸ್ಥಾನದ ವೃತ್ತದಲ್ಲಿ ನಾಲ್ಕು ಕಡೆ ಸಂಚಾರ ಅನುಕೂಲವಾಗುವ ಉದ್ದೇಶದಿಂದ ಒಂದು ಕಡೆ ಸಿಗ್ನಲ್ ಸಮಯ ಹೆಚ್ಚಿಸಲಾಗಿತ್ತು. ಸಂಚಾರ ಠಾಣಾ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಯ ಕಡಿತ ಮಾಡಲು ಕ್ರಮವಹಿಸಲಾಗುವುದು. ಇನ್ನೂ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್‌ಗಳ ಬಗ್ಗೆ ಪರಿಶೀಲಿಸಲಾಗುವುದು.
- ಡಾ.ಸುಮನ್ ಡಿ.ಪನ್ನೇಕರ್, ಎಸ್ಪಿ, ಬಳ್ಳಾರಿ.