ಕೊಟ್ಟೂರಿನಲ್ಲಿ 50 ಹಾಸಿಗೆಗಳ ಆಸ್ಪತ್ರೆ ಕಟ್ಟಡಕ್ಕೆ ಶಾಸಕ ಕೆ.ನೇಮಿರಾಜ್ ನಾಯ್ಕ ಸೋಮವಾರ ಭೂಮಿ ಪೂಜೆ ನೆರವೇರಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ, ಪಪಂ ಮಾಜಿ ಸದಸ್ಯ, ವಕೀಲ ಶಿವಾನಂದ ಬಾವಿಕಟ್ಟಿ ತಹಸೀಲ್ದಾರ ಅಮರೇಶ ಜಿ.ಕೆ ಇತರರು ಇದ್ದರು.
- ಶಾಸಕ ನೇಮಿರಾಜ್ ನಾಯ್ಕ ಹೇಳಿಕೆ
- ಬಸ್ ಡಿಪೋ ನಿರ್ಮಾಣಕ್ಕೂ ಆದ್ಯತೆ
- ಕೊಟ್ಟೂರಿನಲ್ಲಿ 6.45 ಕೋಟಿ ರೂ. ವೆಚ್ಚದ ಆಸ್ಪತ್ರೆ ಕಟ್ಟಡಕ್ಕೆ ಶಂಕುಸ್ಥಾಪನೆ
ಕೊಟ್ಟೂರು: ಪಟ್ಟಣದಲ್ಲಿ 36 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಕೆಲವೆಡೆ ಕೆಲಸಗಳು ಆರಂಭವಾಗಿವೆ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಸೋಮವಾರ 6.45 ಕೋಟಿ ರೂ. ವೆಚ್ಚದ 50 ಹಾಸಿಗೆಗಳ ಆಸ್ಪತ್ರೆ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಅಮೃತ ಯೋಜನೆ ಅಡಿ 83 ಕೋಟಿ ರೂ. ವೆಚ್ಚದಲ್ಲಿ ತುಂಗಭದ್ರಾ ನದಿ ಹಿನ್ನೀರಿನ ಬನ್ನಿಗೋಳ ಜಾಕ್‌ವೆಲ್ನಿಂದ ಕೊಟ್ಟೂರು ಪಟ್ಟಣಕ್ಕೆ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ. ಇದು ಪೂರ್ಣಗೊಂಡ ನಂತರ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವುದಿಲ್ಲ. ಕೆಕೆಆರ್‌ಡಿಬಿ ಮತ್ತು ಡಿಎಂಎಫ್ ಅನುದಾನ ಬಳಸಿ ಪಟ್ಟಣದ ಎಲ್ಲ ರಸ್ತೆಗಳನ್ನ ಸಿಸಿ ಮತ್ತು ಡಾಂಬರೀಕರಣ ಗೊಳಿಸಲಾಗುವುದು ಎಂದು ತಿಳಿಸಿದರು.
ಕೊಟ್ಟೂರು ಹಾಗೂ ಮರಿಯಮ್ಮನಹಳ್ಳಿಯನ್ನು ಪಟ್ಟಣ ಪಂಚಾಯಿತಿಯಿಂದ ಪುರಸಭೆಗೆ ಮತ್ತು ಹಗರಿಬೊಮ್ಮನಹಳ್ಳಿ ಪುರಸಭೆಯನ್ನು ನಗರಸಭೆಯನ್ನಾಗಿಸಲು ಸಚಿವರ ಗಮನ ಸೆಳೆಯಲಾಗುವುದು. ಶೀಘ್ರದಲ್ಲೇ ಕೊಟ್ಟೂರು ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡುವುದರ ಜೊತೆಗೆ ಡಿಪೋ ನಿರ್ಮಾಣಕ್ಕೂ ಪ್ರಯತ್ನಿಸಲಾಗುವುದು. ಪದವಿ ಕಾಲೇಜು ಆರಂಭಕ್ಕೆ ಉನ್ನತ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು ಎಂದರು.
ನನ್ನ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಟೀಕೆ ಮಾಡುವವರು ಮಾಡುತ್ತಲೇ ಇರಲಿ. ಅಂತಹವರಿಗೆ ನಾನು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳೇ ಉತ್ತರ ನೀಡಲಿವೆ. ಜನರು ಅಭಿಮಾನದಿಂದ ಆಶೀರ್ವದಿಸಿದ್ದಾರೆ, ಅವರ ಋಣವನ್ನು ಪ್ರಾಮಾಣಿಕವಾಗಿ ತೀರಿಸುವೆ. ನಾನು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳೇ ಮುಂದಿನ 2028ರ ಚುನಾವಣೆಗೆ ನನಗೆ ಶ್ರೀರಕ್ಷೆಯಾಗಲಿವೆ. ಇದೇ ವೇಳೆ ಮಾ.1ರಂದು ಹಗರಿಬೊಮ್ಮನಹಳ್ಳಿಯಲ್ಲಿ ಜೆಡಿಎಸ್ ಸಂಘಟನೆಗೆ ಚಾಲನೆ ನೀಡಲು ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಮಿಸಲಿದ್ದು, ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.