ಬಳ್ಳಾರಿಯ ಕುವೆಂಪುನಗರದಲ್ಲಿ ಮಾಡೆಲ್ ಹೌಸ್‌ಗೆ ಶಾಸಕ ಜಿ.ಜನಾರ್ದನರೆಡ್ಡಿ, ಮಾಜಿ ಶಾಸಕರಾದ ಬಿ.ಶ್ರೀರಾಮುಲು, ಜಿ.ಸೋಮಶೇಖರರೆಡ್ಡಿ ಭೇಟಿ ನೀಡಿ ಪೊಲೀಸರಿಂದ ಮಾಹಿತಿ ಪಡೆದರು.
ಬಳ್ಳಾರಿ : ನಗರದಲ್ಲಿ ಈಚೆಗೆ ನಡೆದ ಬ್ಯಾನರ್ ಗಲಾಟೆ ಹಾಗೂ ಮನೆಗೆ ಬೆಂಕಿ ಹಚ್ಚಿದ ಪ್ರಕರಣದ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಬಿಜೆಪಿ ಎಲ್ಲ ನಾಯಕರು ಸೇರಿ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಲಾಗುವುದು ಎಂದು ಶಾಸಕ ಜಿ.ಜನಾರ್ದನರೆಡ್ಡಿ ಹೇಳಿದರು.
ನಗರದ ಮಾಡೆಲ್ ಹೌಸ್‌ಗೆ ಭೇಟಿ ನೀಡಿ ಮಾತನಾಡಿದರು. ಬ್ಯಾನರ್ ಗಲಾಟೆಯಲ್ಲಿ ಶಾಸಕ ಅಪ್ತನ ಅಂಗರಕ್ಷಕನ ಬಂದೂಕಿನಿಂದ ಸಿಡಿದ ಗುಂಡಿನಿಂದ ಬಲಿಯಾಗಿದ್ದಾನೆ ಎಂಬುದಾಗಿ ಸ್ವತಃ ಸಚಿವ ಜಮೀರ್ ಅಹ್ಮದ್ ಒಪ್ಪಿಕೊಂಡಿದ್ದಾರೆ. ಆದರೆ, ಈವರೆಗೆ ಶಾಸಕ ಭರತ್‌ರೆಡ್ಡಿ, ಅಪ್ತ ಸತೀಶ್‌ರೆಡ್ಡಿ ಬಂಧನವಾಗಿಲ್ಲ. ಇಡೀ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸದನದಲ್ಲಿ ಆಗ್ರಹಿಸಲಾಗುವುದು ಎಂದರು.
ಕಳೆದ ಮೂರು ತಿಂಗಳ ಹಿಂದೆ ಲೇಔಟ್‌ನಲ್ಲಿ ಕಬ್ಬಿಣದ ಗೇಟ್‌ಗಳ ಕಳವು ಹಿನ್ನೆಲೆ ದೂರು ನೀಡಲಾಗಿತ್ತು. ಇದರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಶಾಸಕ ಭರತ್‌ರೆಡ್ಡಿ ಹಾಗೂ ಎಎಸ್ಪಿ ಕೆ.ಪಿ.ರವಿಕುಮಾರ ಸೇರಿ ಠಾಣಾ ಸಿಪಿಐ ಸತೀಶ್ ಮೇಲೆ ಒತ್ತಡ ಹೇರಿ ಮೂವರನ್ನು ಬಿಡುಗಡೆಗೊಳಿಸಿದ್ದರು. ಮನೆಗೆ ಬೆಂಕಿ ಹಚ್ಚಿರುವ ಘಟನೆ ಕೂಡ ಭರತ್‌ರೆಡ್ಡಿಯೇ ಕುಮ್ಮುಕ್ಕಿನಿಂದಲೇ ನಡೆದಿದೆ. ಇದೊಂದು ರಾಜಕೀಯ ಪ್ರೇರಿತ ಕೃತ್ಯವಾಗಿದೆ. ಪ್ರಕರಣ ಸಂಬಂಧ ಎಎಸ್ಪಿ ರವಿಕುಮಾರನನ್ನು ನಿಯೋಜಿಸಿದ್ದು ತನಿಖೆ ತಪ್ಪಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಎರಡು ನೂರು ಎಕರೆ ಪ್ರದೇಶದಲ್ಲಿರುವ ಲೇಔಟ್ ಭದ್ರತೆಗಾಗಿ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಆ ಸಿಬ್ಬಂದಿಯೇ ಮನೆಗೆ ಬೆಂಕಿ ಹಚ್ಚಿರುವ ಬಗ್ಗೆ ವಿಡಿಯೋ ತೆಗೆದು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದರು ಎಂದು ಹೇಳಿದರು. ಮಾಜಿ ಶಾಸಕರಾದ ಬಿ.ಶ್ರೀರಾಮುಲು, ಜಿ.ಸೋಮಶೇಖರರೆಡ್ಡಿ, ಸುರೇಶಬಾಬು ಇದ್ದರು.