ಬಳ್ಳಾರಿಯಲ್ಲಿ ಸುರಿಯುತ್ತಿರುವ ಮಳೆಯಲ್ಲಿ ವಾಹನಗಳು ಸಂಚರಿಸಿದವು.
- ಗಾಳಿಯೊಂದಿಗೆ ಮಳೆ
- ಸಾರ್ವಜನಿಕರು ಕೆಲ ಕಾಲ ಹೈರಾಣಾ
ಬಳ್ಳಾರಿ : ನಗರದಲ್ಲಿ ಬಿರುಗಾಳಿ ಹಾಗೂ ಗುಡುಗು ಸಹಿತ ಮಂಗಳವಾರ ಮಳೆ ಸುರಿಯಿತು. ಬೆಳಗ್ಗೆಯಿಂದ ಉರಿ ಬಿಸಿಲು ಮತ್ತು ಅತಿಯಾದ ಸೆಕೆಯಿಂದ ಕಂಗಾಲಾಗಿದ್ದ ಜನತೆಗೆ ಮಳೆರಾಯ ತಂಪು ನೀಡಿದರೂ, ಏಕಾಏಕಿ ಬಂದ ಬಿರುಗಾಳಿಯ ಆರ್ಭಟಕ್ಕೆ ಸಾರ್ವಜನಿಕರು ಕೆಲ ಕಾಲ ಹೈರಾಣಾದರು. ಕೆಲವೇ ನಿಮಿಷಗಳಲ್ಲಿ ಜೋರು ಗಾಳಿಯೊಂದಿಗೆ ಮಳೆ ಸುರಿಯಲಾರಂಭಿಸಿತು. ಸುಡುವ ಬಿಸಿಲಿನಿಂದ ಬೆಂದಿದ್ದ ನಗರಕ್ಕೆ ಈ ಮಳೆ ತಂಪು ನೀಡಿತು.
ಮಳೆಯ ಜೊತೆಗೆ ಬೀಸಿದ ಭಾರಿ ಬಿರುಗಾಳಿಗೆ ಕೆಲವಡೆ ಮರದ ಕೊಂಬೆಗಳು ಬಿದ್ದವು. ಇದ್ದಕ್ಕಿದ್ದಂತೆ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿದ್ದ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಆಶ್ರಯ ಪಡೆಯಲು ಪರದಾಡಿದರು.