ಬಳ್ಳಾರಿ : ಕೇಂದ್ರದ ಎನ್‌ಎಂಡಿಸಿ ಸಿ ಬ್ಲಾಕ್‌ನಿಂದ ಅಕ್ರಮವಾಗಿ ಕಬ್ಬಿಣದ ಅದಿರು ಸಾಗಣೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ, 20 ಮೆಟ್ರಿಕ್ ಟನ್ ಕಬ್ಬಿಣದ ಅದಿರು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್ ತಿಳಿಸಿದರು.
ನಗರದ ಎಸ್ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ತಿಂಗಳು ಸಂಡೂರು ಠಾಣಾ ವ್ಯಾಪ್ತಿಯ ಬಾಬಯ್ಯ ಕ್ರಾಸ್ ಬಳಿ ಅಕ್ರಮವಾಗಿ ಅದಿರು ಸಾಗಣೆ ಮಾಡುತ್ತಿದ್ದ ಲಾರಿ ಹಾಗೂ ಆರೋಪಿ ತಿಪ್ಪೇಸ್ವಾಮಿ ವಶಕ್ಕೆ ಪಡೆಯಲಾಗಿತ್ತು. ಆರೋಪಿಯು ಎನ್‌ಎಂಡಿಸಿ ಬ್ಲಾಕ್‌ನಿಂದ ಆಂಧ್ರಪ್ರದೇಶದ ನೇಮಕಲ್ಲು ಬಳಿಯಿರುವ ಶ್ರೀಸಾಯಿ ಬಾಲಾಜಿ ಸ್ಪಾಂಜ್ ಐರನ್ ಇಂಡಿಯಾ ಪ್ರವೈಟ್ ಲಿಮಿಟೆಡ್ ಹಾಗೂ ಬಳ್ಳಾರಿಯ ಸಿರವಾರದ ಬಳಿಯ ನೋಬಲ್ ಇಸ್ಪಾತ್ ಲಿಮಿಟಡ್ ಫ್ಯಾಕ್ಟರಿಗಳಿಗೆ ಸೇರಿ 2487 ಮೆಟ್ರಿಕ್ ಟನ್ ಅಕ್ರಮವಾಗಿ ಅದಿರು ಸಾಗಿಸಿರುವುದಾಗಿ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ. ತನಿಖೆ ಮುಂದುವರಿಸಿ ಇಬ್ಬರು ಆರೋಪಿಗಳು ಹಾಗೂ ಎರಡು ಟಿಪ್ಪರ್‌ಗಳ ಲಾರಿಗಳನ್ನು ವಶಕ್ಕೆ ಪಡೆದು ವಿಚಾರಿಸಿದ ವೇಳೆ ಅಕ್ರಮವಾಗಿ ಅದಿರು ಸಾಗಣೆ ಮಾಡಿರುವುದಾಗಿ ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ. ವಿಚಾರಣೆ ನಡೆಯುತ್ತಿರುವುದರಿಂದ ಆರೋಪಿಗಳ ಮಾಹಿತಿ ಬಹಿರಂಗಪಡಿಸಿಲ್ಲ ಎಂದರು.
ಇಲ್ಲಿನ ಕೈಗಾರಿಕಾ ಪ್ರದೇಶದ ಗೋದಾಮಿನಲ್ಲಿ ಅಕ್ರಮವಾಗಿ 161 ಟನ್ ಯೂರಿಯಾ ದಾಸ್ತಾನು ಇಟ್ಟಿದ್ದ ಪ್ರಕರಣಕ್ಕೆ ಸಂಬಂಧ ಏಳು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ನಗರದ ನಿವಾಸಿಗಳಾದ ರತ್ನರಾಜ್, ಶಾಕೀರ್ ವಲಿ, ರಮೇಶ, ಹನುಮಂತ, ರೆಹಮತ್ ಹುಸೇನ್, ಕಾರ್ತಿಕ್, ಲಕ್ಷಣ ಬಂಧಿಸಿದ್ದು ವಿಚಾರಣಾ ಹಂತದಲ್ಲಿದೆ ಎಂದರು.
ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಮಟ್ಕಾ, ಜೂಜು, ಮರಳು ಮಾಫಿಯಾ, ಮದ್ಯ ಸೇರಿದಂತೆ ಅಕ್ರಮ ಚಟುವಟಿಕೆಗಳ ವಿರುದ್ಧ 127 ಪ್ರಕರಣ ದಾಖಲಿಸಿ, 313 ಆರೋಪಿಗಳನ್ನು ಬಂಧಿಸಿ 18.40 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. 86.20 ಲಕ್ಷ ರೂ. ಮೌಲ್ಯದ ದ್ವಿಚಕ್ರ ಹಾಗೂ ಬೃಹತ್ 26 ವಾಹನಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.