ಬಳ್ಳಾರಿ : ಜಿಲ್ಲೆಯಲ್ಲಿ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಕಾನೂನು ಅಧಿಕಾರಿ(ಹಿರಿಯ) ವಿಭಾಗೀಯ ಕಚೇರಿ ಪ್ರಾರಂಭಗೊಂಡ ಬಳಿಕ ‘ನೊಂದವರಿಗೆ ನ್ಯಾಯ ಜಾಗೃತಿ ಅಭಿಯಾನದಡಿ’ ವಲಯ ವ್ಯಾಪ್ತಿಯಲ್ಲಿ ಕೆಲ ತಿಂಗಳಲ್ಲಿ ಸಾವಿರಾರು ಪ್ರಕರಣಗಳು ವಿಲೇವಾರಿಗೊಂಡಿವೆ ಎಂದು ವಲಯ ವಿಭಾಗೀಯ ಕಾನೂನು ಅಧಿಕಾರಿ ಬಿ.ಎಸ್.ಪಾಟೀಲ ತಿಳಿಸಿದರು.
ನಗರದ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಳ್ಳಾರಿ, ರಾಯಚೂರು, ಕೊಪ್ಪಳ ಹಾಗೂ ವಿಜಯನಗರ ವಲಯದ ವ್ಯಾಪ್ತಿಯಲ್ಲಿ ಅಪರಾಧಿತ, ಜಿಲ್ಲಾ ಸತ್ರ ನ್ಯಾಯಾಲಯ, ಎಸ್‌ಸಿ, ಎಸ್ಟಿ ದೌರ್ಜನ್ಯ, ಫೋಕ್ಸೊ ಜತೆ ಎಸ್‌ಸಿ, ಎಸ್ಟಿ, ಫೋಕ್ಸೊ , ಎನ್‌ಡಿಸಿಎಫ್, ಕ್ರಿಮಿನಲ್ ಮಿಸಲೇನಿಯಸ್, ಕ್ರಿಮಿನಲ್ ಅಪೀಲ್, ಕ್ರಿಮಿನಲ್ ರಿವಿಷನ್ ಪಿಟೀಷನ್, ವಿದ್ಯುತ್ ಕಾಯ್ದೆ, ಗಣಿ ಮತ್ತು ಖನಿಜಗಳ ನಿಯಂತ್ರಣ ಕಾಯ್ದೆ, ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ, ಕರ್ನಾಟಕ ಠೇವಣಿದಾರರ ಹಿತರಕ್ಷಣೆ ಕಾಯ್ದೆ ಹಾಗೂ ಪಿಸಿ ಆ್ಯಕ್ಟ್ ಪ್ರಕರಣಗಳು ಸೇರಿ ಒಟ್ಟು 32,571 ಪ್ರಕಣಗಳು ಸ್ವೀಕತೃಗೊಂಡಿದ್ದವು ಎಂದರು.
ಕಳೆದ ಫೆಬ್ರವರಿ ತಿಂಗಳಲ್ಲೇ ತಪ್ಪೋಪ್ಪಿಗೆ ಮೇರೆಗೆ 127, ವಿಚಾರಣೆಗೆ ಮೇರೆಗೆ 15, ಕೋರ್ಟ್ ಆದೇಶದ ಮೇರೆಗೆ ಬಿಡುಗಡೆ 417 ಹಾಗೂ ಇತರೆ ರೀತಿ ವಿಲೇವಾರಿಯಾದ ಪ್ರಕರಣಗಳು 435 ಸೇರಿ ಒಟ್ಟು 993 ಪ್ರಕರಣಗಳು ವಿಲೇವಾರಿಗೊಂಡಿದ್ದು, ಇನ್ನೂ 31,578 ಪ್ರಕರಣಗಳು ಬಾಕಿಯಿವೆ ಎಂದು ವಿವರಿಸಿದರು.
ನೊಂದವರಿಗೆ ನ್ಯಾಯ ಅಭಿಯೋಜನಾಧಿಕಾರಿಗಳ ಧ್ಯೇಯದ ಘೋಷ ವಾಕ್ಯದೊಂದಿಗೆ ವಿಭಾಗದ ಎಲ್ಲರೂ ಹೆಚ್ಚು ಕ್ರೀಯಾಶೀಲರಾಗಿ ಕಾರ್ಯ ನಿರ್ವಹಿಸುವ ದೃಢಸಂಕಲ್ಪದೊಂದಿಗೆ ಜನಸ್ನೇಹಿಯಾಗಿ ಹಾಗೂ ಶಿಕ್ಷೆಯ ಪ್ರಮಾಣ ಹೆಚ್ಚಿದ್ದು, ತಪ್ಪಿತಸ್ಥರಿಗೆ ಪರಿಣಾಮಕಾರಿಯಾಗಿದೆ ಎಂದು ಹೇಳಿದರು.