ಬಳ್ಳಾರಿ : ಸಂಡೂರು ಪಟ್ಟಣದ ಗಣೇಶ ದೇವಸ್ಥಾನದ ಬಳಿ ಅರ್ಚಕರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಪೊಲೀಸರೆಂದು ನಂಬಿಸಿ ಅರ್ಚಕನ ಕೈಯಲ್ಲಿದ್ದ ಚಿನ್ನ, ಬೆಳ್ಳಿಯ ಎರಡು ಉಂಗುರಗಳನ್ನು ಲಪಟಾಯಿಸಿ ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದೇವಸ್ಥಾನದ ಅರ್ಚಕ ಪದ್ಮನಾಭ ಆಚಾರ್ಯ ದೇವಸ್ಥಾನಕ್ಕೆ ಪೂಜೆ ಮಾಡಲು ತೆರಳುವ ವೇಳೆ ರಸ್ತೆಯಲ್ಲಿ ಬೈಕ್‌ನಲ್ಲಿ ಬಂದ ಕಳ್ಳರಿಬ್ಬರು ಅರ್ಚಕರನ್ನು ಮಾತನಾಡಿಸಿ, ಪಟ್ಟಣದಲ್ಲಿ ಕಳ್ಳರ ಕಾಟ ಹೆಚ್ಚಾಗಿದ್ದು, ಉಂಗುರಗಳನ್ನು ಜೋಪಾನವಾಗಿಟ್ಟುಕೊಳ್ಳಬೇಕು ಎಂದು ಅವರಿಂದ 40 ಸಾವಿರ ರೂ. ಮೌಲ್ಯದ ಬಂಗಾರದ ಉಂಗುರ ಹಾಗೂ ಎರಡು ಸಾವಿರ ರೂ. ಮೌಲ್ಯದ ಬೆಳ್ಳಿಯ ಉಂಗುರಗಳನ್ನು ಪಡೆದು ಪೇಪರ್ ಕವರಿನಲ್ಲಿ ಉಂಗುರಗಳ ಬದಲಾಗಿ ಎರಡು ಕಲ್ಲುಗಳನ್ನು ಇಟ್ಟು ಅರ್ಚಕರಿಗೆ ನೀಡಿ ಪರಾರಿಯಾಗಿದ್ದಾರೆ. ಈ ಕುರಿತು ಸಂಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.