ಸಿರಗುಪ್ಪ ನಗರಸಭೆ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೆಂಕಿ ತಗುಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಟ್ಟ ಹೊಗೆ ಆವರಿಸಿರುವುದು.  
ಬಳ್ಳಾರಿ

ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ದಟ್ಟ ಹೊಗೆ

ಅಶೋಕ್ ಕುಮಾರ್ ಎನ್
ಸಿರಗುಪ್ಪ: ಪಟ್ಟಣದ ಹೊರವಲಯದಲ್ಲಿರುವ ನಗರಸಭೆ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಘನ ತ್ಯಾಜ್ಯಕ್ಕೆ ಬೆಂಕಿ ತಗುಲಿ ದಟ್ಟ ಹೊಗೆ ಆವರಿಸಿದ್ದು ಹಾಗೂ ದುರ್ವಾಸನೆ ಬರುತ್ತಿದೆ. ಇದರಿಂದಾಗಿ ಪಕ್ಕದಲ್ಲಿರುವ ತೆಕ್ಕಲಕೋಟೆ ಹೊನ್ನೂರಮ್ಮ ಎಂ.ಸಿದ್ದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ತರಗತಿಗಳನ್ನು ರದ್ದುಗೊಳಿಸಲಾಯಿತು.
ಘಟಕದಲ್ಲಿ ಶುಕ್ರವಾರದಿಂದ ದಟ್ಟವಾದ ಹೊಗೆ ಬರುತ್ತಿರುವುದರಿಂದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಲ್ಲಿ ಕಣ್ಣು ಉರಿ ಕಾಣಿಸಿಕೊಂಡಿದ್ದು, ಅಸ್ತಮಾ ಸಮಸ್ಯೆ ಇರುವ ಕೆಲವು ಉಪನ್ಯಾಸಕರು ತೀವ್ರ ಉಸಿರಾಟದ ತೊಂದರೆಗೆ ಒಳಗಾಗಿದ್ದಾರೆ. ಇದರಿಂದಾಗಿ ಶನಿವಾರ ವಿದ್ಯಾರ್ಥಿಗಳು ಮನೆಗೆ ಹಿಂದಿರುಗಿದರು.
ಹೊಗೆ ಹಾಗೂ ದುರ್ವಾಸನೆಯಿಂದಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಬಿ.ಎಸ್ಸಿ ವಿದ್ಯಾರ್ಥಿನಿಯನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಕಾಲೇಜಿನಲ್ಲಿ 389 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ತೊಂದರೆ ಅನುಭವಿಸುವಂತಾಗಿದೆ. ಸಿದ್ದಪ್ಪ ನಗರದ ನಿವಾಸಿಗಳು, ಐದು ವಸತಿ ನಿಲಯದ ವಿದ್ಯಾರ್ಥಿಗಳು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಲ್ಲಿ ಕೂಡ ಉಸಿರಾಟದ ತೊಂದರೆ, ಕಣ್ಣು ಉರಿ ಮತ್ತು ಚರ್ಮದ ಅಲರ್ಜಿ ಸಮಸ್ಯೆ ಕಾಣಿಸಿಕೊಂಡಿದೆ.