ಹರಪನಹಳ್ಳಿ ತಾಪಂ ಸಭಾಂಗಣದಲ್ಲಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ತಹಸೀಲ್ದಾರ್ ಬಿ.ವಿ.ಗಿರೀಶ್‌ಬಾಬು, ತಾಪಂ ಇಒ ವೈ.ಎಚ್.ಚಂದ್ರಶೇಖರ್ ಇದ್ದರು. 
ಬಳ್ಳಾರಿ

ಬೇಸಿಗೆಯಲ್ಲಿ ನೀರಿನ ಅಭಾವವಾಗದಿರಲಿ

ಪ್ರಮುಖ ಮುಖ್ಯಾಂಶಗಳು

  • ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ತಾಕೀತು
  • ಹರಪನಹಳ್ಳಿ ತಾಪಂ ಪ್ರಗತಿ ಪರಿಶೀಲನಾ ಸಭೆ
ಹರಪನಹಳ್ಳಿ: ಬೇಸಿಗೆಯೂ ಸಮೀಪಿಸುತ್ತಿದ್ದು, ದಿನೇದಿನೆ ಬಿಸಿಲ ತಾಪ ಹೆಚ್ಚುತ್ತಿದೆ. ತಾಲೂಕಿನಾದ್ಯಂತ ಸಾರ್ವಜನಿಕರಿಗೆ ನೀರಿನ ಕೊರತೆಯಾಗದಂತೆ ಪೂರಕ ವ್ಯವಸ್ಥೆ ಕಲ್ಪಿಸಿ ಎಂದು ಅಧಿಕಾರಿಗಳಿಗೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ತಾಕೀತು ಮಾಡಿದರು.
ನಗರದ ತಾಪಂ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಕುಡಿವ ನೀರಿನ ಅಭಾವ ಹೆಚ್ಚಿರುವ ಕಡೆಗೆ ಖಾಸಗಿ ಬೋರ್‌ವೆಲ್ ಬಾಡಿಗೆಗೆ ಪಡೆದು ನೀರು ಪೂರೈಕೆ ಮಾಡಬೇಕು. ಜೆಜೆಎಂ ಯೋಜನೆ ಮೌಲ್ಯ ಕಳೆದುಕೊಂಡಿದೆ. ಚಿಗಟೇರಿ ಗ್ರಾಮದಲ್ಲಿ ಪೈಪ್‌ಲೈನ್ ಸೋರಿಕೆಯಾಗಿ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಗ್ರಾಮದ ಮಹಿಳೆಯರು ಮೂರು ವರ್ಷದಿಂದ ಸರಿಪಡಿಸುವಂತೆ ಕೋರಿದ್ದು, ಕೂಡಲೆ ಸರಿಪಡಿಸಬೇಕೆಂದರು.
ತಾಲೂಕಿನ ಕೆಲ ಭಾಗದಲ್ಲಿ ಬಾಬು ಜಗಜೀವನರಾಮ್ ಹಾಗೂ ಅಂಬೇಡ್ಕರ್ ಭವನಗಳಲ್ಲಿ ನಿರ್ವಹಣೆ ಕೊರತೆಯಿಂದ ಸ್ವಚ್ಛತೆ ಮರೀಚಿಕೆಯಾಗಿದೆ. ಭವನಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕೆಂದು ಸಮಾಜ ಕಲ್ಯಾಣಾಧಿಕಾರಿ ಎಸ್.ಗಂಗಪ್ಪಗೆ ನಿರ್ದೇಶಿಸಿದರು.
ಎರಡು ಪಶು ಆಂಬುಲೆನ್ಸ್ ಕಾರ್ಯನಿರ್ವಹಣೆ ಕುರಿತು ಪ್ರತಿಕ್ರಿಯಿಸಿದ ಪಶು ವೈದ್ಯಾಧಿಕಾರಿ ಶಿವಕುಮಾರ್, ನಿತ್ಯ ಜಾನುವಾರುಗಳಿಗೆ ಚಿಕಿತ್ಸೆ ನೀಡಿ ಜಿಪಿಎಸ್ ಫೋಟೋ ತೆಗೆಯಲಾಗುತ್ತಿದೆ. ಹಲವು ಕಾರಣಗಳಿಂದ ಸಾವಿಗೀಡಾದ 1829 ಜಾನುವಾರು ಮತ್ತು ಕುರಿಗಳಿಗೆ ಅನುಗ್ರಹ ಯೋಜನೆಯಡಿ 90 ಲಕ್ಷ ರೂ.ಗೂ ಅಧಿಕ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.
ಡೆಂೆ, ಮಲೇರಿಯಾ ಮತ್ತು ಚಿಕೂನ್‌ಗುನ್ಯಾ ಹರಡದಂತೆ ಕ್ರಮವಹಿಸಬೇಕು. ತಾಯಿ ಮತ್ತು ಶಿಶುಗಳ ಸಾವಿನ ಪ್ರಮಾಣ ತಗ್ಗಿಸಲು ಅಗತ್ಯ ಕ್ರಮ ವಹಿಸುವಂತೆ ಟಿಎಚ್‌ಒ ಪೃಥ್ವಿಗೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಸೂಚಿಸಿದರು.
ರಾಜಕೀಯ ಮಾಡಿದರೆ ನೋಟಿಸ್: ಕೆಲ ಶಿಕ್ಷಕರು ಸಂಘಟನೆ ಮಾಡಿಕೊಂಡು ಪವಿತ್ರ ವೃತ್ತಿಯನ್ನು ಮರೆತು ರಾಜಕಾರಣದಲ್ಲಿ ತೊಡಗಿದ್ದಾರೆ. ಅಂಥವರ ವಿರುದ್ಧ ನಿಗಾವಹಿಸಿ ಕೂಡಲೆ ನೋಟಿಸ್ ನೀಡಿ. ನಿಮಗೆ ಏನಾದರೂ ತೊಂದರೆಗಳಿದ್ದರೆ ನನಗೆ ತಿಳಿಸಿ. ಅಂಥವರ ವಿರುದ್ಧ ಕಠಿಣ ಕ್ರಮ ವಹಿಸಲಾಗುವುದು ಎಂದು ಬಿಇಒ ಎಚ್.ಲೇಪಾಕ್ಷಪ್ಪಗೆ ಶಾಸಕಿ ಸೂಚಿಸಿದರು. ವೃತ್ತಿ ಬಗ್ಗೆ ಗಮನ ನೀಡುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ. ಕೆಲವರು ವಾಮಮಾರ್ಗದಿಂದ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಇಒ ದೂರಿದರು. ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.