ಸಿರಗುಪ್ಪ ತಾಲೂಕಿನ ವರಮಯ್ಯ ಕ್ಯಾಂಪ್‌ನ ಕುಡಿವ ನೀರಿನ ಕೆರೆಯಲ್ಲಿ ಸ್ವಚ್ಛತೆಯಿಲ್ಲದೆ ಹುಲ್ಲು ಬೆಳೆದಿರುವುದು.
ಜಿಲ್ಲೆಯ ಸಿರಗುಪ್ಪ ತಾಲೂಕಿನ ಬಲಕುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರಮಯ್ಯ ಕ್ಯಾಂಪ್ ಮೂಲಸೌಕರ್ಯಗಳ ಕೊರತೆಯಿಂದ ಕತ್ತಲಲ್ಲಿ ಕಾಲ ದೂಡುತ್ತಿದೆ. ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಈ ಕ್ಯಾಂಪ್‌ನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಳ ಅಳವಡಿಸಲಾಗಿದೆಯಾದರೂ, ಶುದ್ಧ ಕುಡಿಯುವ ನೀರು ಸಿಗದೆ ನಿವಾಸಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆಯಿದೆ.
ಕ್ಯಾಂಪ್‌ನ ಬಳಿ ಹರಿಯುವ ಎಲ್‌ಎಲ್‌ಸಿ ಕಾಲುವೆಯಿಂದ ನೀರನ್ನು ಕೆರೆಗೆ ತುಂಬಿಸಿ, ಅಲ್ಲಿಂದ ನೇರವಾಗಿ ಓವರ್ ಹೆಡ್ ಟ್ಯಾಂಕ್‌ಗೆ ಸಂಪರ್ಕ ಕಲ್ಪಿಸಿ ಮನೆಗಳಿಗೆ ಹರಿಸಲಾಗುತ್ತಿದೆ. ಆದರೆ, ಈ ನೀರು ಯಾವುದೇ ರೀತಿಯಲ್ಲಿ ಫಿಲ್ಟರ್ (ಶುದ್ಧೀಕರಣ) ಮಾಡುತ್ತಿಲ್ಲ. ಮಳೆಗಾಲ ಆರಂಭವಾಗಿರುವುದರಿಂದ ಕೆಸರು ಮಿಶ್ರಿತ ಕಲುಷಿತ ನೀರು ನಳಗಳಲ್ಲಿ ಬರುತ್ತಿದ್ದು, ಇದನ್ನು ಕುಡಿವ ಮಕ್ಕಳು ಹಾಗೂ ವಯೋವೃದ್ಧರು ಅನಾರೋಗ್ಯಕ್ಕೀಡಾಗುವ ಸಾಧ್ಯತೆ ದಟ್ಟವಾಗಿದೆ.
ಸಂಚಾರಕ್ಕೂ ಪರದಾಟ : 40 ರಿಂದ 50 ಮನೆಗಳಿರುವ ಈ ಕ್ಯಾಂಪ್‌ನಲ್ಲಿ 1 ರಿಂದ 5 ನೇ ತರಗತಿವರೆಗಿನ ಸರ್ಕಾರಿ ಪ್ರಾಥಮಿಕ ಶಾಲೆಯಿದೆ. ಆದರೆ, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೂಕ್ತ ರಸ್ತೆಯಿಲ್ಲದೆ ಮಳೆ ಬಂದರೆ ಇಡೀ ಪರಿಸರ ಕೆಸರು ಗದ್ದೆಯಂತಾಗುತ್ತದೆ. ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲದೆ ನಿತ್ಯ ಶಾಲೆಗೆ ಆಗಮಿಸುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಲೆದಾಡುವಂತಾಗಿದೆ.
ಕಲುಷಿತ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷೃತನ ಎದ್ದು ಕಾಣುತ್ತಿದ್ದು, ಯಾವುದಾದರೂ ದೊಡ್ಡ ಅವಘಡ ಸಂಭವಿಸುವ ಮುನ್ನವೇ ನೀರು ಶುದ್ಧೀಕರಣ ಘಟಕ ಸ್ಥಾಪಿಸಬೇಕು ಮತ್ತು ರಸ್ತೆ ದುರಸ್ತಿಗೊಳಿಸಬೇಕು ಎಂಬುದು ಆಗ್ರಹವಾಗಿದೆ.
ಶುದ್ಧ ಕುಡಿವ ನೀರು ಮತ್ತು ಸುಸಜ್ಜಿತ ರಸ್ತೆ ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದೆ. ಜಿಪಂ ಹಾಗೂ ತಾಲೂಕು ಆಡಳಿತ ಕಣ್ಣು ಮುಚ್ಚಿ ಕುಳಿತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ತುರ್ತು ಕ್ರಮ ಕೈಗೊಳ್ಳಬೇಕಿದೆ.
ಕೋಟ್.... ಕ್ಯಾಂಪ್‌ಗೆ ಶುದ್ಧಿಕರಣ ಘಟಕ ಅಳವಡಿಸುವುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮವಹಿಸಲಾಗುವುದು.- ಶಶಿಕಾಂತ್ ಶಿವಪುರೆ, ಉಪ ಕಾರ್ಯದರ್ಶಿ, ಜಿಪಂ, ಬಳ್ಳಾರಿ.