ಕಂಪ್ಲಿ ಗುರುಮಠದಲ್ಲಿ ಆಯೋಜಿಸಿದ್ದ ಶಿವಾನುಭವ ಕಾರ್ಯಕ್ರಮದಲ್ಲಿ ಹೊಸಪೇಟೆಯ ಶ್ರೀ ಶಂಕರ್ ಆನಂದ್‌ಸಿಂಗ್ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಮಲ್ಲಿಕಾರ್ಜುನ ಅಕ್ಕಿ ಮಾತನಾಡಿದರು. 
ಬಳ್ಳಾರಿ

ವಚನದಲ್ಲಿವೆ ಮಾನವೀಯ ಅಂಶಗಳು

ಅಶೋಕ್ ಕುಮಾರ್ ಎನ್
ಕಂಪ್ಲಿ: ವಚನ ಸಾಹಿತ್ಯದ ಆಶಯಗಳೇ ಸಂವಿಧಾನದ ಆಶಯಗಳಾಗಿವೆ ಎಂದು ಹೊಸಪೇಟೆ ಶ್ರೀ ಶಂಕರ್ ಆನಂದ್‌ಸಿಂಗ್ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಮಲ್ಲಿಕಾರ್ಜುನ ಅಕ್ಕಿ ಹೇಳಿದರು.
ಪಟ್ಟಣದ ಗುರುಮಠದಲ್ಲಿ ಲಿಂ.ಓದ್ಸೋ ಕರಿಬಸಯ್ಯ ಅವರ ಶಿವಾನಂದಾಶ್ರಮದಿಂದ ಆಯೋಜಿಸಿದ್ದ 257ನೇ ಶಿವಾನುಭವ ಕಾರ್ಯಕ್ರಮದಲ್ಲಿ ‘ವಚನ ಸಾಹಿತ್ಯ ಮತ್ತು ಸಂವಿಧಾನ’ ಕುರಿತು ಶನಿವಾರ ಉಪನ್ಯಾಸ ನೀಡಿದರು. ವಚನ ಸಾಹಿತ್ಯ ತತ್ವ, ಆದರ್ಶಗಳ ಸಾರ ಭಾರತದ ಸಂವಿಧಾನದಲ್ಲಿ ಅಡಕವಾಗಿವೆ. ಸಂವಿಧಾನದಲ್ಲಿರುವ ಜಾತ್ಯತೀತ, ಸಮಾನತೆ, ಸಹೋದರತ್ವ, ಸಹಿಷ್ಣುತೆ ಮೊದಲಾದ ಮಾನವೀಯ ಅಂಶಗಳು ವಚನ ಸಾಹಿತ್ಯದಲ್ಲಿವೆ. ವಚನ ಸಾಹಿತ್ಯ ಅರ್ಥೈಸಿಕೊಂಡು ಅಳವಡಿಸಿಕೊಂಡಲ್ಲಿ ಭಾರತದ ಸಂವಿಧಾನ ಅಳವಡಿಸಿಕೊಂಡಂತಾಗುತ್ತದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ ಮಾತನಾಡಿ, ಶಿವಾನಂದಾಶ್ರಮ ಎಂಟು ದಶಕಗಳಿಂದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಹೊಸಪೇಟೆಯ ಸಂಗಮ್ಮ ಅಕ್ಕಿ ವಚನಗಳನ್ನು ಪ್ರಸ್ತುತಪಡಿಸಿದರು. ಪ್ರಮುಖರಾದ ಗೊಗ್ಗ ಕಾರ್ತಿಕ್, ಎಚ್.ಎಂ.ಜಗದೀಶ, ಯೋಗರಾಜ, ಕೆ.ಎಂ.ಚಂದ್ರಶೇಖರಸ್ವಾಮಿ ಇತರರಿದ್ದರು.