ಬಳ್ಳಾರಿಯಲ್ಲಿ ನಾಡೋಜ ಬುರ‌್ರಕಥಾ ಈರಮ್ಮ ಫೌಂಡೇಷನ್ ಹಳೇ ದರೋಜಿ ಸಹಯೋಗದೊಂದಿಗೆ ಆಯೋಜಿಸಿದ್ದ ‘ರಂಗಭೂಮಿಯ ಮೂಲಕ ಜೀವನ ಮೌಲ್ಯಗಳ ಬೋಧನೆ’ ಉಪನ್ಯಾಸ ಕಾರ್ಯಕ್ರಮವನ್ನು ರಂಗನಿರ್ದೇಶಕ ಸಿ.ಬಸವಲಿಂಗಯ್ಯ ಉದ್ಘಾಟಿಸಿದರು. ಫೌಂಡೇಷನ್ ಅಧ್ಯಕ್ಷ ಡಾ.ಅಶ್ವರಾಮು, ಕಲಾವಿದ ಪುರುಷೋತ್ತಮ ಹಂದ್ಯಾಳ್, ಉಪನ್ಯಾಸಕರಾದ ಚಂದ್ರಿಕಾ ಎ.ವೈ. , ಎನ್.ಅನುಷಾ ಇದ್ದರು.
ಬಳ್ಳಾರಿ: ರಂಗಭೂಮಿ ಜೀವನದ ಪ್ರತಿಬಿಂಬವಾಗಿದ್ದು, ವ್ಯಕ್ತಿಯ ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ರೂಪಿಸುವಲ್ಲಿ ಪ್ರಮುಖ ಸಾಧನವಾಗಿದೆ ಎಂದು ಮೈಸೂರಿನ ರಂಗನಿರ್ದೇಶಕ ಸಿ.ಬಸವಲಿಂಗಯ್ಯ ಹೇಳಿದರು.
ನಗರದ ಸತ್ಯಂ ಶಿಕ್ಷಣ ಕಾಲೇಜಿನಲ್ಲಿ ನಾಡೋಜ ಬುರ‌್ರಕಥಾ ಈರಮ್ಮ ಫೌಂಡೇಷನ್ ಹಳೇ ದರೋಜಿ ಸಹಯೋಗದೊಂದಿಗೆ ಆಯೋಜಿಸಿದ್ದ ‘ರಂಗಭೂಮಿಯ ಮೂಲಕ ಜೀವನ ಮೌಲ್ಯಗಳ ಬೋಧನೆ’ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು. ವಿದ್ಯಾರ್ಥಿಗಳು ನಾಟಕ ಗಳ ಮೂಲಕ ಸತ್ಯ, ಸಹಾನು ಭೂತಿ, ಸಹಕಾರ, ಶಿಸ್ತು ಮುಂತಾದ ಮೌಲ್ಯಗಳನ್ನು ಅನುಭವಾತ್ಮಕವಾಗಿ ಕಲಿಯಲು ಸಾಧ್ಯವಾಗುತ್ತದೆ. ಇಂದಿನ ಯಾಂತ್ರಿಕ ಯುಗದಲ್ಲಿಯೂ ರಂಗಭೂಮಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಫೌಂಡೇಷನ್ ಅಧ್ಯಕ್ಷ ಡಾ.ಅಶ್ವರಾಮು ಮಾತನಾಡಿ, ಶಿಕ್ಷಣದಲ್ಲಿ ಮೌಲ್ಯಾಧಾರಿತ ಕಲಿಕೆ ಅಗತ್ಯವಾಗಿದೆ. ರಂಗಭೂಮಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಣೆ ನೀಡುವ ಶಕ್ತಿಯುತ ಮಾಧ್ಯಮವಾಗಿದೆ. ಸ್ಥಳೀಯ ಕಲೆಯ ಸಂರಕ್ಷಣೆ ಮತ್ತು ರಂಗಭೂಮಿಯ ಬೆಳವಣಿಗೆಯಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ರಂಗಭೂಮಿಯ ಮೂಲಕ ಸಮಾಜದ ಸಮಸ್ಯೆಗಳನ್ನು ಅರಿತುಕೊಂಡು, ಸಕಾರಾತ್ಮಕ ಬದಲಾವಣೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.