ಸಿರಿಗೇರಿ ಗ್ರಾಮದಲ್ಲಿ ನಡೆದ ಜಾನಪದ ಜಾಗರಣೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ಡೊಳ್ಳು ಬಾರಿಸಿದರು.
ಬಳ್ಳಾರಿ : ಇತ್ತೀಚಿನ ದಿನಗಳಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದ ಗ್ರಾಮೀಣ ಪ್ರದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜನಪ್ರಿಯತೆ ತಗ್ಗುತ್ತಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕಾರ್ಯಾಕಾರಿ ಸಮಿತಿ ಸದಸ್ಯ ಎಸ್.ಎಂ.ನಾಗರಾಜ ಸ್ವಾಮಿ ಹೇಳಿದರು.
ಗ್ರಾಮದಲ್ಲಿ ಶ್ರೀಶಂಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಹೆಜ್ಜೆಗೆಜ್ಜೆ ಬಯಲಾಟ ಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಜಾನಪದ ಜಾಗರಣೆಯ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವ ಪೀಳಿಗೆಯಲ್ಲಿ ಬಯಲಾಟ, ನಾಟಕ, ವೀರಗಾಸೆ, ಯಕ್ಷಗಾನ ಅಂತಹ ಕಲೆಗಳು ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ. ಪಾಲಕರು ಗ್ರಾಮೀಣ ಕಲೆಗಳಲ್ಲಿ ಭಾಗವಹಿಸುವಂತೆ ಮಕ್ಕಳಿಗೆ ಪ್ರೇರಣೆ ನೀಡಬೇಕು ಎಂದು ಸಲಹೆ ನೀಡಿದರು. ಬಳಿಕ ಸುಗಮ ಸಂಗೀತ, ರಂಗ ಗೀತೆ, ಡೊಳ್ಳು ಕುಣಿತ, ಸಮೂಹ ನೃತ್ಯ ಹಾಗೂ ಸಾಮಾಜಿಕ ನಾಟಕ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ. ನಾಗರಾಜ, ಹೆಜ್ಜೆಗೆಜ್ಜೆ ಬಯಲಾಟ ಕಲಾ ಟ್ರಸ್ಟ್ ಅಧ್ಯಕ್ಷ ಎಚ್ ತಿಪ್ಪೇಸ್ವಾಮಿ, ಗ್ರಾಮದ ಮುಖಂಡರಾದ ಎಸ್.ಎನ್. ವಿರೂಪಾಕ್ಷಗೌಡ, ಹೂಗಾರ್ ಬಸವರಾಜ್, ಎಸ್.ಎಂ. ಅಡಿವೆಯ್ಯಸ್ವಾಮಿ, ಕುಂಬಾರ್ ಬಸವರಾಜ್ ಇತರರಿದ್ದರು.