ಉಜ್ಜಿನಿ ಜಗದ್ಗುರುಗಳ ಪಾದಯಾತ್ರೆ ಹಿನ್ನೆಲೆಯಲ್ಲಿ ಚಾನುಕೋಟಿ ಮಠದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಉಜ್ಜಿನಿ ಜಗದ್ಗುರುಗಳು, ಕಾಶಿ ಜಗದ್ಗುರುಗಳು, ಡಾ.ಸಿದ್ದಲಿಂಗ ಶಿವಾಚಾರ್ಯರು, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ಎಂ ದಾರುಕೇಶ, ಹಿರಿಯರು ಚನ್ನವೀರಸ್ವಾಮಿ, ವರ್ತಕ ಕೆ.ವಿವೇಕಾನಂದ ಇತರರು ಇದ್ದರು. 
ಬಳ್ಳಾರಿ

ಧರ್ಮ ಜಾಗೃತಿಗಾಗಿ ಪಾದಯಾತ್ರೆ ಶ್ಲಾಘನೀಯ

ಶಾಮಸುಂದರ್ ಕೊಪ್ಪಳಕರ್
ಕೊಟ್ಟೂರು:  ಇತ್ತೀಚೆಗೆ ಜಾತಿ-ಜಾತಿಗಳ ಮಧ್ಯೆ ಹಾಗೂ ಧರ್ಮಗಳ ಮಧ್ಯೆ ಸೌಹಾರ್ದ, ಸಾಮರಸ್ಯ ಇಲ್ಲದಂತಾಗಿದೆ. ಇಂಥ ಸಂದರ್ಭದಲ್ಲಿ ಉಜ್ಜಿನಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಪಾದಯಾತ್ರೆ ಮೂಲಕ ಧರ್ಮಜಾಗೃತಿಗೆ ಮುಂದಾಗಿರುವುದು ಶ್ಲಾಘನೀಯ ಎಂದು ಕಾಶಿ ಜಗದ್ಗುರು ಚಂದ್ರಶೇಖರ ಭಗವತ್ಪಾದರು ಹೇಳಿದರು.
ಉಜ್ಜಿನಿ ಜಗದ್ಗುರುಗಳು ಚಿಕ್ಕಮಗಳೂರು ಜಿಲ್ಲೆ ಬುಕ್ಕಾಂಬುಧಿಯಲ್ಲಿ ತಪೋನುಷ್ಠಾನ ಗೈದು ಶತಮಾನೋತ್ಸವ ತುಂಬಿದ ನಿಮಿತ್ತ ಹಾಲಿ ಜಗದ್ಗುರುಗಳು ಉಜ್ಜಿನಿ ಪೀಠದಿಂದ ಬುಕ್ಕಾಂಬುದಿಯವರೆಗೆ ಡಿ.21 ರಿಂದ 11 ದಿನಗಳು ಪಾದಯಾತ್ರೆ ಕೈಗೊಳ್ಳುವ ಸಂಕಲ್ಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಪಟ್ಟಣದ ಚಾನುಕೋಟಿ ಮಠದ ಸಭಾಂಗಣದಲ್ಲಿ ಕೊಟ್ಟೂರು ಕಟ್ಟಿಮನಿ ದೈವಸ್ಥರ ಜತೆ ಉಭಯ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆದ ಮೊದಲ ಪೂರ್ವಭಾವಿ ಸಭೆಯಲ್ಲಿ ಚಾಲನೆ ನೀಡಿ ಆಶೀರ್ವಚನ ನೀಡಿದರು. ಪಾದಯಾತ್ರೆಯ ವಿವಿಧ ಸೇವಾ ಸಮಿತಿಯ ಸದಸ್ಯರು ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಉಜ್ಜಿನಿ ಜಗದ್ಗುರುಗಳ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದರು.
ಉಜ್ಜಿನಿ ಜಗದ್ಗುರುಗಳು ಮಾತನಾಡಿ, ಲಿಂ.ಉಜ್ಜಿನಿ ಜಗದ್ಗುರುಗಳು ಲೋಕಕಲ್ಯಾಣಕ್ಕಾಗಿ ತಪೋನುಷ್ಠಾನ ಮಾಡಿದ್ದರು. ಆ ಮಹಾನ್ ತಪಸ್ವಿಗಳ ಮಾರ್ಗದಲ್ಲಿ ಪಾದಯಾತ್ರೆ ಮಾಡಿಕೊಂಡು, ವಾಸ್ತವ್ಯ ಸ್ಥಳಗಳಲ್ಲಿ ಧರ್ಮ ಸಭೆ ಮಾಡಿ, ಜನರಲ್ಲಿ ಪರಿಸರ ಜಾಗೃತಿ, ವೃಕ್ಷ ಆಂದೋಲನ, ಮಳೆಕೊಯ್ಲು ಮತ್ತು ಜಾತಿ ಜಾತಿಗಳಲ್ಲಿ ಬಿರುಕು ಬಿಟ್ಟಿರುವ ಸಾಮರಸ್ಯ, ಸೌಹಾರ್ದ ಕಾಯ್ದುಕೊಳ್ಳುವಂತೆ ಧರ್ಮ ಬೋಧನೆ ಮಾಡುವ ಸಂಕಲ್ಪ ಮಾಡಲಾಗಿದೆ. ಜ.1ರಂದು ಬುಕ್ಕಾಂಬುಧಿ ತಲುಪಿ, ಅಲ್ಲಿನ ಬೆಟ್ಟದಲ್ಲಿ ಐದು ದಿನ ತಪೋನುಷ್ಠಾನ ಮಾಡಲಾಗುವುದು. ಜ.6 ಮತ್ತು 7ರಂದು ಆ ಭಾಗದಲ್ಲಿ ಐವರು ಜಗದ್ಗುರುಗಳ ಪಾಲ್ಗೊಳ್ಳುವಿಕೆಯಲ್ಲಿ ವಿಜೃಂಭಣೆಯಿಂದ ಧರ್ಮಸಭೆ ನಡೆಯುತ್ತದೆ ಎಂದು ಆಶೀರ್ವಚನ ನೀಡಿದರು.
ಡೋಣೂರು ಚಾನುಕೋಟಿ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯರು, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ಎಂ ದಾರುಕೇಶ, ಉಜ್ಜಿನಿ ಗ್ರಾಮದ ಹಿರಿಯ ಚನ್ನವೀರಸ್ವಾಮಿ, ವರ್ತಕ ಕೆ.ವಿವೇಕಾನಂದ, ಗುರುಬಸವರಾಜ ಹಾಗೂ ಉದ್ಯಮಿ ಅಂಗಡಿ ಪಂಪಾಪತಿ, ಹೂಗಾರ ನಾಗರಜ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ನವೀನ್ ಕುಮಾರ್, ಉಜ್ಜಿನಿ ಗ್ರಾಮದ ಪ್ರಮುಖ ಲೋಕಣ್ಣ ಕಟ್ಟಿಮನಿ, ಕಟ್ಟಿಮನಿ ದೈವಸ್ಥರು ಮತ್ತು ಉಜ್ಜಿನಿ ಗ್ರಾಮಸ್ಥರು ಜತೆ ಬುಕ್ಕಾಂಬುಧಿ ಭಾಗದ ವಿವಿಧ ಗ್ರಾಮದ ನೂರಾರು ಭಕ್ತರು ಇದ್ದರು.