ಕೊಟ್ಟೂರಿನಲ್ಲಿ ನಾಗರಿಕ ಕಾವಲು ಸಮಿತಿ ಸಹಾಯವಾಣಿ ವೆಬ್‌ಸೈಟ್ ಪೋಸ್ಟರನ್ನು ಸಮಿತಿ ರಾಜ್ಯ ಸಂಚಾಲಕ ಹಾಗೂ ಕರ್ನಾಟಕ ರಾಜ್ಯ ರೈತಸಂಘದ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಬಿಡುಗಡೆ ಮಾಡಿದರು. ಜಿಲ್ಲಾ ಸಂಚಾಲಕ ಡಾ.ತಿಪ್ಪೇಸ್ವಾಮಿ ವೆಂಕಟೇಶ, ಎಚ್.ಶಿವಕುಮಾರ್, ಟಿ.ರವಿ, ಮಲ್ಲಿಕಾರ್ಜುನ ಇದ್ದರು.
- ರೈತಸಂಘದ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ
- ಆಕ್ರೋಶ ವೆಬ್‌ಸೈಟ್ ಪೋಸ್ಟರ್ ಬಿಡುಗಡೆ
ಕೊಟ್ಟೂರು: ಎಸ್‌ಐಆರ್ ಮತದಾರರ ವಿರೋಧಿ ಮತ್ತು ಅಪಾಯಕಾರಿ ಪ್ರಕ್ರಿಯೆಯಾಗಿದೆ ಎಂದು ನಾಗರಿಕ ಮತಕಾವಲು ಸಮಿತಿ ರಾಜ್ಯ ಸಂಚಾಲಕ ಹಾಗೂ ಕರ್ನಾಟಕ ರಾಜ್ಯ ರೈತಸಂಘದ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಹೇಳಿದರು.
ನಾಗರಿಕ ಕಾವಲು ಸಮಿತಿ ವೆಬ್‌ಸೈಟ್ ಪೋಸ್ಟರ್ ಬಿಡುಗಡೆ ಮಾಡಿ ಭಾನುವಾರ ಮಾತನಾಡಿದರು. ಮತಗಳ್ಳತನ ನಡೆಯುತ್ತಿದ್ದು, ಕಳ್ಳರನ್ನು ಹಿಡಿಯಿರಿ ಎಂದರೆ, ಜನರನ್ನೆಲ್ಲ ಕಳ್ಳರಂತೆ ವಿಚಾರಣೆ ಮಾಡುವ ಕೆಲಸ ನಡೆಯುತ್ತಿದೆ. ಎಸ್‌ಐಆರ್ ನಡೆದಿರುವ 13 ರಾಜ್ಯಗಳಲ್ಲಿ ಐದು ಕೋಟಿ ಭಾರತೀಯ ಪ್ರಜೆಗಳು ಮತದಾನದ ಹಕ್ಕು ಕಳೆದುಕೊಂಡು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದರು.
ಕರ್ನಾಟಕದಲ್ಲೂ 70 ಲಕ್ಷ ಮತದಾರರ ಹಕ್ಕು ರದ್ದಾಗಬಹುದು. ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಗ್ರಾಮೀಣ ಮಹಿಳೆಯರ ಮತದಾನ ಹಕ್ಕು ಕಿತ್ತುಕೊಳ್ಳುವ ತಂತ್ರವೇ ಎಸ್‌ಐಆರ್ ಪ್ರಕ್ರಿಯೆಯಾಗಿದ್ದು, ನಾಗರಿಕರು ಜಾಗೃತವಾಗಬೇಕು. ಪ್ರತಿ ವಾರ್ಡ್, ಗ್ರಾಮಗಳ ಸಭೆ ನಡೆಸಿ ಬಿಎಲ್‌ಎ-2 ಗಳು ಮತದಾರರ ಹೆಸರು ಓದಿ ಅವರ ಹೆಸರು ನಮೂದಿಸುವ ಕೆಲಸವಾಗಬೇಕು. ಈ ಮಹತ್ವದ ಕಾರ್ಯಕ್ಕೆ ನಾಗರಿಕ ಮತಕಾವಲು ಸಮಿತಿ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ವೆಬ್‌ಸೈಟ್ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಜಿಲ್ಲಾ ಸಂಚಾಲಕ ಡಾ.ತಿಪ್ಪೇಸ್ವಾಮಿ ವೆಂಕಟೇಶ, ಹಗರಿಬೊಮ್ಮನಹಳ್ಳಿ ತಾಲೂಕು ಸಂಚಾಲಕ ಹೆಚ್.ಶಿವಕುಮಾರ್,ರೈತ ಸಂಘದ ಸದಸ್ಯರಾದ ಟಿ.ರವಿ, ಮಲ್ಲಿಕಾರ್ಜುನ ಮತ್ತಿತರರು ಇದ್ದರು.