ಕುರುಗೋಡಿನ ಬಿಜೆಪಿ ಕಚೇರಿಯಲ್ಲಿ ವಿಬಿ ಜಿ ರಾಮ್ ಜಿ ಕಾಯ್ದೆ ಕಾರ್ಯಾಗಾರದಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕ ಡಾ.ಶ್ಯಾಮಾಪ್ರಸಾದ್ ಮುಖರ್ಜಿ ಹಾಗೂ ಪಂ.ದೀನ್ ದಯಾಳ್ ಉಪಾಧ್ಯಾಯ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು.
ಕುರುಗೋಡು: ಕೇಂದ್ರ ಸರ್ಕಾರ ನರೇಗಾ ಬದಲಿಗೆ ಗ್ರಾಮ ಸ್ವರಾಜ್ ಎಂಬ ಹೊಸ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಟ್ಟಿದೆ ಎಂದು ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಡಲ ಘಟಕದಿಂದ ಆಯೋಜಿಸಿದ್ದ ವಿಬಿ ಜಿ ರಾಮ್ ಜಿ ಕಾಯ್ದೆ ಕುರಿತ ಕಾರ್ಯಾಗಾರದಲ್ಲಿ ಮಂಗಳವಾರ ಮಾತನಾಡಿದರು. ಉಚಿತ ಗ್ಯಾರಂಟಿ ಯೋಜನೆಯಿಂದ ರಾಜ್ಯ ಸರ್ಕಾರದ ಖಜಾನೆ ಖಾಲಿ ಆಗಿದೆ. ವಿಬಿ ಜಿ ರಾಮ್ ಜಿ ಯೋಜನೆಗೆ ಶೇ.40 ವಂತಿಗೆ ಒದಗಿಸದ ಸ್ಥಿತಿಗೆ ತಲುಪಿದೆ ಎಂದು ದೂರಿದರು.
ಕೇಂದ್ರ ಸರ್ಕಾರದ ದಕ್ಷ ಆಡಳಿತದಿಂದ ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿದೆ. ಹೀಗಾಗಿ ಯೂರೋಪ್ ರಾಷ್ಟ್ರಗಳು ಭಾರತದೊಂದಿಗೆ ಕೈಜೋಡಿಸುತ್ತಿವೆ. ಅಮೆರಿಕ ಕೂಡ ತೆರಿಗೆಯನ್ನು ಶೇ.25 ರಿಂದ 18ಕ್ಕೆ ಇಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿಗೆ ಪ್ರತಿಯೊಬ್ಬರೂ ಕೈಜೊಡಿಸಬೇಕು ಎಂದರು.
ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ ಮಾತನಾಡಿ, ನಕಲಿ ಗಾಂಧಿ ಕುಟುಂಬ ಅನೇಕ ವರ್ಷದಿಂದ ದೇಶವನ್ನು ಲೂಟಿ ಮಾಡಿದೆ. ಯಾದಗಿರಿ, ಕಲಬುರಗಿ ಸೇರಿದಂತೆ ಇತರೆಡೆ ನರೇಗಾ ಯೋಜನೆ ಅಕ್ರಮದ ಕೂಪವಾಗಿದೆ. ಇದನ್ನು ತಡೆಯಲು ಕೇಂದ್ರ ಸರ್ಕಾರ ಹಲವು ಬದಲಾವಣೆ ತಂದಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಮಂಡಲ ಅಧ್ಯಕ್ಷ ಮದಿರೆ ಕುಮಾರಸ್ವಾಮಿ ಮಾತನಾಡಿ, ಸಕಾಲಕ್ಕೆ ಹಣ ಮತ್ತು ಕೆಲಸ ಒದಗಿಸಲು ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಪಾರದರ್ಶಕವಾಗಿ ಯೋಜನೆ ಜಾರಿಯೊಂದಿಗೆ ಕೆಲಸದ ಅವಧಿಯನ್ನು 100ರಿಂದ 125 ದಿನಕ್ಕೆ ಹೆಚ್ಚಿಸಿದೆ. ರೈತರಿಗೆ ಕಾರ್ಮಿಕರ ಕೊರತೆಯಾಗದಂತೆ ಕಟಾವು ಸಂದರ್ಭ ಹೊರತುಪಡಿಸಿ ಬೇರೆ ದಿನಗಳಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ ಎಂದರು. ಪ್ರಮುಖರಾದ ಗಾಳಿ ಶಂಕರಪ್ಪ, ಸೋಮಶೇಖರ ಗೌಡ ಇತರರಿದ್ದರು.