ಬಂಡ್ರಿಯಲ್ಲಿ ನೀರಿನ ಹೊಂಡವನ್ನು ಅಧಿಕಾರಿಗಳು ಹಾಗೂ ರೈತರು ಭಾನುವಾರ ವೀಕ್ಷಿಸಿದರು. ಗಂಗಾವತಿಯ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಪಿ.ಆರ್. ಬದರಿ ಪ್ರಸಾದ್, ಸಾವಯವ ಕೃಷಿಕ ಬಂಡ್ರಿ ದುರುಗಪ್ಪ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಚ್.ವಿ. ಸಜ್ಜನ್, ಸ್ವರೂಪ್ ಕೊಟ್ಟೂರು ಉಪಸ್ಥಿತರಿದ್ದರು. 
ಬಳ್ಳಾರಿ

ಕಡಿಮೆ ಸಂಪನ್ಮೂಲದಲ್ಲಿ ಹೆಚ್ಚಿನ ಲಾಭದ ಮಾರ್ಗ

ಶಾಮಸುಂದರ್ ಕೊಪ್ಪಳಕರ್
ಸಂಡೂರು: ಕೃಷಿಕರು ಪರಸ್ಪರ ಜಮೀನುಗಳಿಗೆ ಭೇಟಿ ನೀಡಿ, ನುರಿತ ರೈತರೊಂದಿಗೆ ನಿರಂತರ ಸಂವಾದ ನಡೆಸಬೇಕು. ವಿಜ್ಞಾನಿಗಳ ಸಲಹೆ-ಸೂಚನೆಗಳನ್ನು ಅಳವಡಿಸಿಕೊಂಡು ಕೃಷಿ ಪದ್ಧತಿ ಹಾಗೂ ವಿಧಾನಗಳಲ್ಲಿ ಸುಧಾರಣೆ ಮಾಡಿಕೊಳ್ಳಬೇಕು. ಒಟ್ಟಾರೆ ಕೃಷಿ ಅನುಭವ ಮತ್ತು ಜ್ಞಾನವೇ ರೈತನನ್ನು ಯಶಸ್ಸಿನ ದಾರಿಯಲ್ಲಿ ಮುನ್ನಡೆಸುತ್ತದೆ ಎಂದು ಗಂಗಾವತಿಯ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಪಿ.ಆರ್. ಬದರಿ ಪ್ರಸಾದ್ ಹೇಳಿದರು.
ಬಂಡ್ರಿಯಲ್ಲಿ ಭಾನುವಾರ ಹಸಿರಿನೊಂದಿಗೆ ಮಾತುಕತೆಯ 17ನೇ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ರೈತರು ಕಡಿಮೆ ಜಮೀನು, ಕಡಿಮೆ ನೀರು ಹಾಗೂ ಕಡಿಮೆ ಖರ್ಚಿನಲ್ಲಿ ಹೆಚ್ಚು ಮತ್ತು ನಿರಂತರ ಆದಾಯ ನೀಡುವ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಸಾವಯಕ ಕೃಷಿಕ ಬಂಡ್ರಿ ದುರುಗಪ್ಪ ಮಾತನಾಡಿ, ಕಬ್ಬು ಬೆಳೆಗೆ ಬೆಂಬಲ ಬೆಲೆಗಾಗಿ ಸರ್ಕಾರದ ಮೇಲೆ ಅವಲಂಬಿಸುವ ಬದಲು ರೈತರು ತಾವೇ ಶುದ್ಧ ಬೆಲ್ಲ ತಯಾರಿಸಿ ಮಾರುಕಟ್ಟೆಗೆ ಮಾರಾಟ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು. ತಮ್ಮ ಬೆಳೆಗಳಿಗೆ ಮೌಲ್ಯವರ್ಧನೆ ಮಾಡುವುದನ್ನು ಕಲಿತಾಗ ಮಾತ್ರ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಧ್ಯ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಚ್.ವಿ. ಸಜ್ಜನ್ ಮಾತನಾಡಿ, ರೈತರು ಅರಣ್ಯ ಕೃಷಿಯತ್ತ ಗಮನ ಹರಿಸಬೇಕು. ಈ ಭಾಗಕ್ಕೆ ಬೆಳವಲ ಹಾಗೂ ಹುಣಸೆ ಬೆಳೆಗಳು ಸೂಕ್ತವಾಗಿವೆ. ಮನಸ್ಸು ಮಾಡಿದರೆ ಜೀವಂತ ಬೇಲಿಯಿಂದಲೂ ಆದಾಯ ಗಳಿಸಬಹುದಾಗಿದೆ. ಇದರಿಂದ ರೈತರು ಆರ್ಥಿಕವಾಗಿ ಮತ್ತಷ್ಟು ಬಲಿಷ್ಠರಾಗಬಹುದು ಎಂದು ಹೇಳಿದರು.
ನರಸಾಪುರ ಜಿ.ಕೆ. ನಾಗರಾಜ್, ಹೊಸಪೇಟೆ ಜಂಬುನಾಥ, ತುಂಬರಗುದ್ದಿ ಕುಮಾರಸ್ವಾಮಿ, ರೇವಣ್ಣಸಿದ್ದಪ್ಪ ತಿಪ್ಪನಮರಡಿ, ಶಶಿಧರ ಗುರೂಜಿ, ನಾಗೇಶ್ವರ ಸಿ.ಎಸ್.ಪುರ ಅವರು ಸಾವಯವ ಕೃಷಿ ಹಾಗೂ ಅದರ ಭವಿಷ್ಯದ ಕುರಿತಾಗಿ ಇರುವ ಹೊಸ ಅವಕಾಶಗಳು ಮತ್ತು ಸಾಧ್ಯತೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಬಂಡ್ರಿ ಓಬಳೇಶ್, ಬಸವರಾಜ್ ಕನಕಗಿರಿ, ಸ್ವರೂಪ್ ಕೊಟ್ಟೂರು, ಶಿವಣ್ಣ ಅಪ್ಪೇನಹಳ್ಳಿ, ಕರೆ ಹನುಮ, ಆಶಾ ಕೊಟ್ಟೂರು, ನಾಗಭೂಷಣ, ಸಣ್ಣಜ್ಜ, ಮಹಾಂತೇಶ್, ಆರ್. ರಾಜಾಭಕ್ಷಿ, ಮಹೇಶ್ವರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.