ಹರಪನಹಳ್ಳಿ ತಾಲೂಕಿನ ಸಿಂಗ್ರಿಹಳ್ಳಿ ದೊಡ್ಡ ತಾಂಡದಲ್ಲಿ ನಡೆದ ಸಂತ ಸೇವಾಲಾಲ್ ಹಾಗೂ ಮರಿಯಮ್ಮ ದೇವಿ ಜಾತ್ರೋತ್ಸವಕ್ಕೆ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಚಾಲನೆ ನೀಡಿದರು. ಚಿತ್ರದುರ್ಗ ಬಂಜಾರ ಗುರು ಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ದೂಪದಹಳ್ಳಿ ಶಕ್ತಿಪೀಠದ ಶಿವಪ್ರಕಾಶ್ ಮಹಾರಾಜ, ತಾಂಡದ ನಾಯಕ, ಡಾವೋ, ಕಾರಭಾರಿ ಇತರರಿದ್ದರು.
ಪಲ್ಲಕ್ಕಿ ಮೆರವಣಿಗೆ ಅದ್ದೂರಿ
ಹರಪನಹಳ್ಳಿ: ಹಬ್ಬಗಳು ಸಂಬಂಧ ಬೆಸೆಯುವ ಕೊಂಡಿಗಳಾಗಬೇಕೇ ಹೊರತು ದುಂದುವೆಚ್ಚಗಳ ಆಗರ ಆಗಬಾರದು ಎಂದು ಮಾಜಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.
ಸಿಂಗ್ರಿಹಳ್ಳಿ ದೊಡ್ಡ ತಾಂಡದಲ್ಲಿ 14 ವರ್ಷಗಳ ಬಳಿಕ ನಡೆದ ಸಂತ ಸೇವಾಲಾಲ್ ಹಾಗೂ ಮರಿಯಮ್ಮ ದೇವಿ ಜಾತ್ರೋತ್ಸವಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಗ್ರಾಮಸ್ಥರು ದುಶ್ಚಟಗಳಿಂದ ದೂರ ಇದ್ದು, ಉತ್ತಮ ಶಿಕ್ಷಣ ಪಡೆದು ಪ್ರಜ್ಞಾವಂತ ಸಮಾಜದ ನಿರ್ಮಾಣದಲ್ಲಿ ತೊಡಗಬೇಕು ಎಂದರು.
ವಿವಿಧ ವಾದ್ಯಮೇಳದೊಂದಿಗೆ ಸಿಂಗ್ರಿಹಳ್ಳಿ ಶ್ರೀ ದುರ್ಗಮ್ಮ ದೇವಿ, ಸಂತ ಸೇವಾಲಾಲ್, ಶ್ರೀ ಮರಿಯಮ್ಮ ದೇವಿ ಪಲ್ಲಕ್ಕಿ ಮೆರವಣಿಗೆ ಮಾಡಲಾಯಿತು. ಬಂಜಾರ ಸಮುದಾಯದ ವಾಜ (ಭಜನೆ) ಆರಾಧನೆ ನಡೆಯಿತು. ದಾರಿಯುದ್ದಕ್ಕೂ ಭಕ್ತರು ಪಲ್ಲಕ್ಕಿಯ ಕೆಳಗಡೆ ಕುಳಿತು ಹರಕೆ ತೀರಿಸಿದರು.