ವಿಜಯವಾಣಿ ಸುದ್ದಿಜಾಲ ಬಳ್ಳಾರಿ
ಜಿಲ್ಲೆಯಲ್ಲಿ ಕರ್ನಾಟಕ ಅಭಿವೃದ್ಧಿ ಪ್ರಗತಿ ಪರಿಶೀಲನೆ (ಕೆಡಿಪಿ) ಸಭೆ ನಡೆದು ಇಂದಿಗೆ (ಸೆ.29) ಬರೋಬ್ಬರಿ ವರ್ಷ ಕಳೆದಿದೆ. ಇದೇ ಕೊನೆ ಕೆಡಿಪಿ ಸಭೆಯೂ ಇಲ್ಲ, ಜಿಲ್ಲಾ ಉಸ್ತುವಾರಿ ಸಚಿವರೂ ಇಲ್ಲದ ಜಿಲ್ಲೆ ಅರಸನಿಲ್ಲದ ಅರಮನೆಯಂತಾಗಿದ್ದು, ಜನರ ಸಮಸ್ಯೆ ಆಲಿಸುವವರು ಯಾರು ಎಂಬ ಪ್ರಶ್ನೆ ಕಾಡತೊಡಗಿದೆ.
2025ರ ಸೆ.29ರಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಒಂದೇ ದಿನದಲ್ಲಿ ಜನಸ್ಪಂದನ ಹಾಗೂ ಕೆಡಿಪಿ ಸಭೆ ನಡೆದಿದ್ದು ಬಿಟ್ಟರೆ ಮತ್ತಾವುದೇ ಸಭೆ ಈವರೆಗೆ ನಡೆದಿಲ್ಲ. ಸಿಎಂ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಸಚಿವರಾದ ಬಳಿಕ ಕೆಡಿಪಿ ಸಭೆ ನಡೆಯಲಿದೆ ಎಂಬ ಆಶಾಕಿರಣ ಮೂಡಿತ್ತು. ಆದರೆ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಆರೋಪದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಎರಡೂ ತಿಂಗಳು ಕಳೆದರೂ ಜಿಲ್ಲೆಗೆ ಉಸ್ತುವಾರಿ ಸಚಿವರು ನೇಮಕಗೊಂಡಿಲ್ಲ.
ಸದ್ಯ, ಜಿಲ್ಲೆಯಲ್ಲಿ ಬದಲಾದ ವಾತಾವರಣದಿಂದ ಹೆಚ್ಚುತ್ತಿರುವ ಡೆಂೆ ಆತಂಕ, ಶಿಥಿಲಗೊಂಡಿರುವ ಶಾಲಾ ಕಟ್ಟಡಗಳು, ಮಹಾನಗರ ಪಾಲಿಕೆ, ಬುಡಾದಲ್ಲಿ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ, ಮುಂಗಾರು-ಹಿಂಗಾರು ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ, ಮಳೆ ಕೊರತೆ, ಬೆಳೆ ನಷ್ಟ, ಕುಡಿವ ನೀರು, ತುಂಗಭದ್ರಾ ಜಲಾಶಯದಿಂದ ಎಚ್‌ಎಲ್ ಮತ್ತು ಎಲ್‌ಎಚ್ ಕಾಲುವೆ ಕೊನೇ ಭಾಗಕ್ಕೆ ತಲುಪದ ನೀರು, ಜಾನವಾರುಗಳಿಗೆ ಮೇವು ವಿತರಣೆ, ರಾಬಕೊವಿ ಹಾಲು ಒಕ್ಕೂಟದ ರಾಜಕೀಯ ಸಂಘರ್ಷ, ಎಪಿಎಂಸಿಯಲ್ಲಿ ವರ್ತಕರು ದಲ್ಲಾಳಿಗಳ ನಡುವೆ ಜಗಳ, ಅಕ್ರಮ ಗಣಿಗಾರಿಕೆ, ಬರ ಪೀಡಿತ ತಾಲೂಕುಗಳಿಗೆ ಸಿಗದ ಪರಿಹಾರ, ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ, ಶಿಕ್ಷಕರ ಹುದ್ದೆ ಭರ್ತಿಯಾಗದೆ ಫಲಿತಾಂಶದ ಮೇಲೆ ಪರಿಣಾಮ ಹೀಗೆ ನೂರಾರು ಸಮಸ್ಯೆಗಳಿದ್ದು ಸ್ಪಂದಿಸುವವರು ಯಾರು ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡತೊಡಗಿದೆ.
ಜಿಲ್ಲೆಯ ಪ್ರಮುಖ ಬೆಳೆ ಭತ್ತ ಈ ಬಾರಿ ಮಳೆ ಕೊರತೆಯಿಂದ ಶೇ.50 ನಾಟಿಗೊಂಡಿದೆ. ಇದಲ್ಲದೇ, ದಿನೇದಿನೆ ಜಲಾಶಯದಲ್ಲಿ ನೀರಿನ ಪ್ರಮಾಣ ತಗ್ಗುತ್ತಿರುವುದರಿಂದ 2ನೇ ಬೆಳೆಗೆ ನೀರು ಹರಿಸುವುದು ಅನುಮಾನವಿದೆ. ಆದ್ದರಿಂದ, ಎರಡನೇ ಬೆಳೆ ಬೆಳೆಯದಿದ್ದರೆ ಅಕ್ಕಿ ಬೆಲೆ ಗಗನಕ್ಕೆ ಏರಲಿದೆ. ಜಾನಾವಾರುಗಳಿಗೆ ಮೇವು ಅಭಾವ ಉಂಟಾಗಲಿದೆ. ಬೇಸಿಗೆಯಲ್ಲಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಲಿದ್ದು, ಈ ಎಲ್ಲ ಸಮಸ್ಯೆಗಳ ಬಗ್ಗೆ ಸಭೆ ನಡೆಸಿ ಕ್ರಿಯಾಯೋಜನೆ ತಯಾರಿಸುವವರೇ ಇಲ್ಲದಾಂತಗಿದೆ.
ಜಿಲ್ಲಾಮಟ್ಟದ ಕೆಡಿಪಿ ಸಭೆಗಳು ಆಗಾಗ ನಡೆಯಬೇಕು. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಬೇಕು. ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಈ ಸಭೆ ಮುಖ್ಯವಾಗಿದೆ. ಕೆಡಿಪಿ ಸಭೆ ನಡೆಯದೇ ಇರುವುದರಿಂದ ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳ ಬಳಿ ಕೆಲಸಗಳನ್ನು ಮಾಡಿಸಲು ಸಾಧ್ಯವಾಗುವುದಿಲ್ಲ ಎಂಬುದಾಗಿ ಜಿಲ್ಲೆಯ ಶಾಸಕರೊಬ್ಬರು ಮಾಹಿತಿ ಹಂಚಿಕೊಂಡರು. ಇದಲ್ಲದೇ, ಬಹುತೇಕ ಜನಪ್ರತಿನಿಧಿಗಳು ಬೆಂಗಳೂರಿನಲ್ಲಿಯೇ ಬೀಡು ಬಿಟ್ಟಿದ್ದು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವರು ಯಾರು ಎಂಬಂತಾಗಿದೆ.
ಕೆಡಿಪಿ ಸಭೆ ನಡೆಸಿ ಪ್ರಗತಿ ಪರಿಶೀಲಿಸದ ಕಾರಣ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳದ್ದೇ ಕಾರುಬಾರು ನಡೆದಿದೆ ಎಂಬುದು ಸಾರ್ವಜನಿಕರ ಆರೋಪ. ಯಾವ ಇಲಾಖೆಗೆ ಎಷ್ಟು ಅನುದಾನ ಬಂದಿದೆ, ಎಷ್ಟು ಬಳಕೆಯಾಗಿದೆ, ಫಲಾನುಭವಿಗಳಿಗೆ ತಲುಪಿದೆಯೇ ಅಥವಾ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ರಾಜಕಾರಣಿಗಳ ಹಿಂಬಾಲಕರ ಪಾಲಾಯಿತೇ, ಬಳಕೆಯಾಗದೇ ಸರ್ಕಾರಕ್ಕೆ ಮರಳಿ ಹೋಯಿತೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗದಾಗಿದೆ. ಇನ್ನು ಡಿಸಿ ಕೆ.ನಾಗೇಂದ್ರ ಪ್ರಸಾದ್ ವಿವಿಧ ಇಲಾಖೆಗಳ ಸಭೆ ನಡೆಸಿ ಒಂದಿಷ್ಟು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ.
ಜಿಲ್ಲೆಯ ಐವರು ಕಾಂಗ್ರೆಸ್ ಶಾಸಕರಿದ್ದು, ಈ ಪೈಕಿ ಇಬ್ಬರು ಸಚಿವ ಸ್ಥಾನಕ್ಕಾಗಿ ಕಸರತ್ತು ನಡೆಸುತ್ತಿದ್ದಾರೆ. ಹೈಕಮಾಂಡ್ ಕೂಡ ಎಸ್ಟಿ ಸಮುದಾಯದವರಿಗೆ ಸಚಿವ ಸ್ಥಾನ ನೀಡಿ ಮಹಿಳಾ ಕೋಟಾ ಹಾಗೂ ಎಸ್ಟಿ ಸಮುದಾಯ ಬೆಂಬಲ ಪಡೆಯುವ ಉದ್ದೇಶ ಹೊಂದಲಾಗಿದೆ ಎನ್ನಲಾಗಿದೆ. ಜಿಲ್ಲಾ ಮಟ್ಟದಲ್ಲಿ ಪ್ರತಿ ಶನಿವಾರ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ. ಇದರಲ್ಲಿ ಗೃಹಲಕ್ಷ್ಮಿ, ಪಿಂಚಣಿ ಹಣ ಜಮೆಯಾಗುತ್ತಿಲ್ಲ ಎಂಬ ವ್ಯಾಪಕ ದೂರುಗಳು ಬಂದಿವೆ. ಒಟ್ಟಾರೆ, ಹಲವು ವರ್ಷಗಳ ಬಳಿಕ ಜಿಲ್ಲೆ ಕಾಂಗ್ರೆಸ್ ವಶವಾಗಿದ್ದು, ಸಾರ್ವಜನಿಕರು ಸಮಸ್ಯೆ ಆಲಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೊಡೆತ ಬೀಳಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.
ರಾಜ್ಯ ಸರ್ಕಾರ ಬಳ್ಳಾರಿ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದೆ. ಸ್ಥಳೀಯ ಜನಪ್ರತಿನಿಧಿಗಳಿಗೆ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಆಸಕ್ತಿಯಿಲ್ಲ. ಜಿ.ಸೋಮಶೇಖರರೆಡ್ಡಿ ಮಾಜಿ ಶಾಸಕ, ಬಳ್ಳಾರಿ