ಬಳ್ಳಾರಿಯಲ್ಲಿ ಆಯೋಜಿಸಿದ್ದ ಸಂಕ್ರಾಂತಿ ರಂಗೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಸೂರ್ಯ ಕಲಾ ಟ್ರಸ್ಟ್ ತಂಡದಿಂದ ನೃತ್ಯ ಪ್ರದರ್ಶಿಸಲಾಯಿತು.
ಬಳ್ಳಾರಿ : ನಾಟಕಗಳಿಂದ ಸಾಂಸ್ಕೃತಿಕ ಪರಂಪರೆಯು ನಮ್ಮ ಮುಂದೆ ಕನ್ನಡಿಯಾಗಿ ಉಳಿದಿದೆ ಎಂದು ಮೇಯರ್ ಪಿ.ಗಾದೆಪ್ಪ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ರಂಗ ಜಂಗಮ ಸಂಸ್ಥೆ, ಅಲಾಪ ಸಂಗೀತ ಕಲಾ ಟ್ರಸ್ಟ್ ಸಹಯೋಗದೊಂದಿಗೆ ಈಚೆಗೆ ಆಯೋಜಿಸಿದ್ದ ಸಂಕ್ರಾಂತಿ ರಂಗೋತ್ಸವ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯದ ಎಲ್ಲ ಬಗೆಗಳಲ್ಲಿ ನಾಟಕವೇ ಹೆಚ್ಚು ರಮ್ಯವಾಗಿರುತ್ತದೆ. ಪ್ರಕಾಶಮಾನವಾಗಿ ಸರ್ವರಿಗೂ ವಿಷಯಗಳನ್ನು ತಲುಪಿಸುವಲ್ಲಿ ಸತತ ಪ್ರಯತ್ನಿಸುತ್ತಿದೆ ಎಂದು ಹೇಳಿದರು
ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ, ಸಂಗೀತ, ನೃತ್ಯ, ನಾಟಕ ಕಲೆಗಳ ಬೆಳವಣಿಗೆಗೆ ಸ್ಥಳೀಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನುದಾನ ಒದಗಿಸಿಗ ಸಹಕಾರ ನೀಡಬೇಕು. ಪಾಲಿಕೆಯಿಂದ ಸ್ಥಳೀಯ ಕಲಾವಿದರು ಇತರ ಪ್ರಕಾರಗಳಲ್ಲಿ ಗುರುತಿಸಿ ಪ್ರಶಸ್ತಿಗಳನ್ನ ನೀಡುವ ಒಂದು ಪರಿಪಾಠ ಕೂಡ ಹಮ್ಮಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕಲಬುರಗಿ ರಂಗಾಯಣದಿಂದ ಹುಲುಗಪ್ಪ ಕಟ್ಟಿಮನಿ ನಿರ್ದೇಶನದ ‘ ಕಾಲಚಕ್ರ ನಾಟಕ ’ ಪ್ರದರ್ಶಿಸಲಾಯಿತು. ವೇದಿಕೆಯಲ್ಲಿ ಸಿಎ ಸಿರಿಗೇರಿ ಪನ್ನರಾಜ್, ಪತ್ರಕರ್ತರಾದ ಕೆ.ಎಂ.ಮಂಜುನಾಥ, ಶಶಿಧರ್ ಮೇಟಿ, ಜಿಲ್ಲಾ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ರಮಣಪ್ಪ ಭಜಂತ್ರಿ, ಡಾ.ಅಣ್ಣಾಜಿ ಕೃಷ್ಣರೆಡ್ಡಿ ಇದ್ದರು.