ಸಿರಗುಪ್ಪ ಗುರುಭವನದಲ್ಲಿ ಆಯೋಜಿಸಿದ್ದ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಸಂಶೋಧನಾರ್ಥಿ ಡಾ.ವಿನೋದ್ ಆರ್.ಬಿ. ರಚಿಸಿದ ‘ಶ್ರೀ ಸೇವಾ ಚರಿತಾಮೃತ’ ಪುಸ್ತಕವನ್ನು ಶ್ರೀ ರಾಮನಗರ ಶಾಖಾಮಠದ ಡಾ.ಕುಮಾರ ಮಹಾರಾಜರು ಬಿಡುಗಡೆಗೊಳಿಸಿದರು. 
ಬಳ್ಳಾರಿ

ಬದುಕು ಉದ್ಧರಿಸಿದ ಮಹನೀಯ

ಸಿರಗುಪ್ಪ: ಬಂಜಾರ ಸಮುದಾಯದ ಜನರಲ್ಲಿ ಆತ್ಮಸ್ಥೈರ್ಯ ತುಂಬಿ ಸನ್ಮಾರ್ಗದ ಹಾದಿ ತೋರುವುದರೊಂದಿಗೆ ಸಮಾಜದ ಏಳಿಗೆಗಾಗಿ ನಿರಂತರ ಶ್ರಮಿಸಿದ ಸೇವಾಲಾಲ್ ಮಹಾರಾಜರು ದೇಶ ಕಂಡ ಶ್ರೇಷ್ಠ ಧಾರ್ಮಿಕ, ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರಾಗಿದ್ದಾರೆ ಎಂದು ರಾಮನಗರ ಶಾಖಾಮಠದ ಡಾ.ಕುಮಾರ ಮಹಾರಾಜರು ಹೇಳಿದರು.
ಪಟ್ಟಣದ ಗುರುಭವನದಲ್ಲಿ ಸೇವಾಲಾಲ್ ಜಯಂತಿ ಹಾಗೂ ಸಂಶೋಧನಾರ್ಥಿ ಡಾ.ವಿನೋದ್ ಆರ್.ಬಿ. ರಚಿಸಿದ ‘ಶ್ರೀ ಸೇವಾ ಚರಿತಾಮೃತ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಧ್ಯಾತ್ಮಿಕ ಉಪದೇಶ ನೀಡಿ ಜನರನ್ನು ಸನ್ಮಾರ್ಗದತ್ತ ಕೊಂಡೊಯ್ದರು. ಜನರಲ್ಲಿ ಧೈರ್ಯ, ಸಾಹಸ, ಆತ್ಮಸ್ಥೆರ್ಯ ಮತ್ತು ಆತ್ಮಾಭಿಮಾನ ಮೂಡಿಸಿದರು. ಸೇವಾಲಾಲರ ಬೋಧನೆ ಮತ್ತು ಚಿಂತನೆಗಳು ಬಂಜಾರ ಜನಾಂಗದಲ್ಲಿ ಏಕತೆ ಮೂಡಿಸುವುದರೊಂದಿಗೆ ಮಿಥ್ಯಾಚರಣೆ ತೊಲಗಿಸಿ ಬದುಕು ಉದ್ಧರಿಸಿದರು ಎಂದು ತಿಳಿಸಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ ಮಾತನಾಡಿ, ಮಾನವ ಜನ್ಮ ಪವಿತ್ರವಾಗಿದ್ದು, ಅದನ್ನು ಹಾಳು ಮಾಡಿಕೊಳ್ಳಬೇಡಿ. ವ್ಯಸನಗಳಿಂದ ದೂರವಿರಿ. ಅರಿಷ್ವರ್ಗಗಳನ್ನು ಸುಟ್ಟು ಹಾಕಿ, ಪ್ರಾಮಾಣಿಕವಾಗಿ ಜೀವಿಸಬೇಕು. ಕಷ್ಟ ದಲ್ಲಿ ಇರುವವರಿಗೆ ಸಹಾಯ ಮಾಡಬೇಕು. ಸೇವಾಲಾಲ್ ಅವರು ಶಿಕ್ಷಣದ ಮಹತ್ವ ಸಾರುವ ಮೂಲಕ ಎಲ್ಲರೂ ಶಿಕ್ಷಿತರಾಗಬೇಕು. ಅಕ್ಷರ ಜ್ಞಾನ ಪಡೆದು ಜಗತ್ತಿಗೆ ದಾರಿ ದೀಪವಾಗಬೇಕು. ಸಮಾಜದ ಜನರ ಕಷ್ಟಕ್ಕಾಗಿ ಪ್ರಾಣಾರ್ಪಣೆಗೂ ಸಿದ್ಧರಾಗಿದ್ದರು ಎಂದು ಹೇಳಿದರು.
ಗುರುಬಸವ ಮಠದ ಬಸವ ಭೂಷಣ ಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸಿದ್ದರಾಮ ಕಲ್ಮಠ, ಶಿಕ್ಷಕ ದಿವಾಕರ್ ನಾರಾಯಣ, ಪ್ರಾಧ್ಯಾಪಕ ಕೊಟ್ರಪ್ಪ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಯು.ವೆಂಕೋಬ, ಕಸಾಪ ತಾಲೂಕು ಅಧ್ಯಕ್ಷ ಡಾ.ಮಧುಸೂದನ್ ಕಾರಿಗನೂರು, ವಕೀಲ ಕೆ.ವೆಂಕಟೇಶ, ಡಾ.ನಾ.ಮ.ಶಿವಪ್ರಕಾಶ್, ಸಿ.ಆರ್.ಪಿ ಶಾಂತಾ, ಮೋತಿ ನಾಯಕ್, ಹರಿನಂದ ನಾಯಕ್, ಪ್ರವಚಕ ಶ್ರೀನಿವಾಸ್ ರೆಡ್ಡಿ, ಕೆ.ತಾಂಡದ ಬಂಜಾರ ಸಮುದಾಯದ ಪ್ರಮುಖರಿದ್ದರು.