ಹರಪನಹಳ್ಳಿ ತಾಲೂಕಿನ ಹಲುವಾಗಲು ಗ್ರಾಮದಲ್ಲಿ ಹೂವಕ್ಕ ಅಂಧ ಮಗ ಹಾಗೂ ಮಾನಸಿಕ ಅಸ್ವಸ್ಥ ಮೊಮ್ಮಗನೊಂದಿಗೆ ಇರುವುದು.  
ಬಳ್ಳಾರಿ

ಬದುಕಿನ ಭಾರಕ್ಕೆ ಬಾಡಿದ ಹೂವಕ್ಕ: ಅಂಧ ಮಗ-ಬುದ್ಧಿಮಾಂದ್ಯ ಮೊಮ್ಮಗನ ಜವಾಬ್ದಾರಿ

ಪ್ರಮುಖ ಮುಖ್ಯಾಂಶಗಳು

  • ತಾವರಗುಂದಿ ಗ್ರಾಮದ 75 ವರ್ಷದ ಹೂವಕ್ಕ
  • ಪತಿ 19 ವರ್ಷಗಳ ಹಿಂದೆ ಮೃತ
  • ಗ್ರಾಮಸ್ಥರ ನೆರವಿನೊಂದಿಗೆ ಬದುಕು
ಹರಪನಹಳ್ಳಿ: ಮಕ್ಕಳು ಕೊನೆಗಾಲದಲ್ಲಿ ಆಸರೆಯಾಗಬಹುದು ಎಂದು ಕನಸು ಕಂಡಿದ್ದ ಹಿರಿಯ ಜೀವ ಬೀದಿ ಪಾಲಾಗಿದೆ. ಇದು ತಾವರಗುಂದಿ ಗ್ರಾಮದ 75 ವರ್ಷದ ಹೂವಕ್ಕ ಕ್ಯಾತಪ್ಪನವರ ಅವರ ಕಣ್ಣೀರಿನ ಕತೆಯಾಗಿದೆ.
ಹೂವಕ್ಕಗೆ ಇಬ್ಬರು ಪುತ್ರರು ಮತ್ತು ಪುತ್ರಿಯಿದ್ದಾರೆ. ಪತಿ 19 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಹಿರಿಯ ಮಗ ಮದುವೆಯಾದ ನಂತರ ಪ್ರತ್ಯೇಕವಾಗಿ ವಾಸವಾಗಿದ್ದು, ಕಳೆದ ಕೆಲ ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಪುತ್ರಿ ಮದುವೆಯಾಗಿ ಪತಿ ಮನೆಯಲ್ಲಿ ವಾಸವಾಗಿದ್ದಾರೆ. ಕಿರಿಯ ಮಗನಿಗೆ ಎರಡೂ ಕಣ್ಣುಗಳು ಕಾಣಿಸುವುದಿಲ್ಲ. ಕಿರಿಯ ಮಗನನ್ನು ನೋಡಿಕೊಳ್ಳುವುದು ಹೂವಮ್ಮ ಅವರ ಹೆಗಲಿಗೆ ಬಿದ್ದಿದೆ.
ಹೂವಮ್ಮ ವಾಸಿಸುತ್ತಿದ್ದ ಮನೆ ಅತಿವೃಷ್ಟಿಯಿಂದ 12 ವರ್ಷಗಳ ಹಿಂದೆ ಬಿದ್ದಿತು. ಆಗ ದಿಕ್ಕು ತೋಚದಾದ ಹೂವಕ್ಕ ಕುಟುಂಬ ನಿರ್ವಹಣೆಗಾಗಿ ಸಂಬಂಧಿಕರು ಹಾಗೂ ಗ್ರಾಮಸ್ಥರ ಮೊರೆ ಹೋಗಿದ್ದರು. ಕೆಲವರು ಸಹಾಯ ನೀಡಿದರೆ ಇನ್ನು ಕೆಲವರು ತಾತ್ಸಾರದಿಂದ ನೋಡಿದ್ದರು.
ತಾವರಗುಂದಿಯಲ್ಲಿ ಬದುಕು ಕಷ್ಟವೆನಿಸಿದಾಗ ಹೂವಕ್ಕ ಪುತ್ರನೊಂದಿಗೆ ಪಕ್ಕದ ಹಲುವಾಗಲು ಗ್ರಾಮಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಗ್ರಾಮಸ್ಥರ ನೆರವಿನೊಂದಿಗೆ ಬದುಕು ಸಾಗಿಸುತ್ತಿದ್ದ ಹೂವಕಕ್ಕೆ ಇನ್ನೊಂದು ಆಘಾತ ಕಾದಿತ್ತು. ತಂದೆಯನ್ನು ಕಳೆದುಕೊಂಡಿದ್ದ ಮಾನಸಿಕ ಅಸ್ವಸ್ಥ ಮೊಮ್ಮಗನ ಜವಾಬ್ದಾರಿಯೂ ಹೂವಕ್ಕ ಹೆಗಲಿಗೆ ಬಿದ್ದಿದೆ.
ಸರ್ಕಾರದಿಂದ ಬರುವ ವೃದ್ಧಾಪ್ಯ ವೇತನ 800 ರೂ. ಹಾಗೂ ಅಂಧ ಪುತ್ರನಿಗೆ ಬರುವ 1400 ರೂ. ಮಾಸಾಶನದಲ್ಲಿ ಹೂವಕ್ಕ ಜೀವನ ಸಾಗಿಸುತ್ತಿದ್ದಾರೆ. ಹಣ ಇಲ್ಲದಿದ್ದಾಗ ಮಗ ಹಾಗೂ ಮೊಮ್ಮಗನಿಗೆ ಊಟದ ವ್ಯವಸ್ಥೆ ಮಾಡಿ ತಾನು ಉಪವಾಸ ಇರುತ್ತಾರೆ.