ಬಿ.ವಿ.ಬಸವರಾಜ್ 
ಬಳ್ಳಾರಿ

ನಾಡಿದ್ದು ಪ್ರಥಮ ಪುಣ್ಯಸ್ಮರಣೆ

ಪ್ರಮುಖ ಮುಖ್ಯಾಂಶಗಳು

  • ಶೈಕ್ಷಣಿಕ ಕ್ಷೇತ್ರದಲ್ಲಿಯೂ ಮಹತ್ವದ ಸೇವೆ

ಬಳ್ಳಾರಿ :

ನಗರದ ಹೊರವಲಯದ ಕೆಆರ್‌ಎಸ್ ಫಂಕ್ಷನ್ ಹಾಲ್‌ನಲ್ಲಿ ಆ.9ರಂದು ಬೆಳಗ್ಗೆ 10ಗಂಟೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ರಾಷ್ಟ್ರೀಯ ಅಧ್ಯಕ್ಷ , ಮಾಜಿ ಸಭಾಪತಿ ಡಾ.ಎನ್.ತಿಪ್ಪಣ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಕೀಲ ಬಿ.ವಿ.ಬಸವರಾಜ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಡಾ.ಎನ್.ತಿಪ್ಪಣ್ಣ ಅವರ ಕುಟುಂಬ ವರ್ಗ, ವಕೀಲರ ವೃಂದ ಹಾಗೂ ಅಭಿಮಾನಿಗಳ ಬಳಗದಿಂದ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಕೊಟ್ಟೂರು ಸ್ವಾಮಿ ಮಠದ ಬಸವಲಿಂಗ ಮಹಾಸ್ವಾಮೀಜಿ ದಿವ್ಯ ನೇತೃತ್ವ ವಹಿಸಲಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಹಾಗೂ ಸಚಿವ ಬಿ. ನಾಗೇಂದ್ರ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಗೌರವ ಉಪಸ್ಥಿತರಾಗಿ ವಿಶ್ರಾಂತ ಉಪ ಲೋಕಾಯುಕ್ತ ಪತ್ರಿ ಬಸವನಗೌಡ, ಮಾಜಿ ಸಚಿವರಾದ ಬಸವರಾಜ್ ಪಾಟೀಲ್ ಅನ್ವರಿ, ಎಚ್. ಏಕಾಂತಯ್ಯ, ಅಲ್ಲಂ ವೀರಭದ್ರಪ್ಪ ಭಾಗವಹಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಶಾಸಕ ನಾರಾ ಭರತ್‌ರೆಡ್ಡಿ, ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಲಿಂಗೈಕ್ಯ ಡಾ.ಎನ್. ತಿಪ್ಪಣ್ಣ ಅವರ ಸಾಮಾಜಿಕ, ಶೈಕ್ಷಣಿಕ, ಕಾನೂನು ಹಾಗೂ ಸಾರ್ವಜನಿಕ ಸೇವೆ ಸ್ಮರಿಸಿ ಗೌರವ ಸಲ್ಲಿಸಲಾಗುವುದು. ವಚನ ಗಾಯನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಪ್ರೀತಿಯ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದರು.
ಡಾ.ಎನ್.ತಿಪ್ಪಣ್ಣ ಅವರು ನ್ಯಾಯಾಂಗ ಕ್ಷೇತ್ರದ ಜತೆಗೆ ಸಾರ್ವಜನಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಮಹತ್ವದ ಸೇವೆ ಸಲ್ಲಿಸಿದ್ದರು. ವೀರಶೈವ ವಿದ್ಯಾವರ್ಧಕ ಸಂಘದ ಅಭಿವೃದ್ಧಿಗೆ ಹಾಗೂ ಸಮಾಜದ ಸಂಘಟನೆಯಲ್ಲಿ ಅವರು ನೀಡಿದ ಕೊಡುಗೆ ಸ್ಮರಿಸುವ ಉದ್ದೇಶದಿಂದ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಮುಖರಾದ ಚಾನಾಳ್ ಶೇಖರ್, ಪಂಚಾಕ್ಷರಯ್ಯ, ಚೋರನೂರು ಕೊಟ್ರಪ್ಪ, ವೀರೂಪಾಕ್ಷಪ್ಪ, ಮಂಜುನಾಥ, ಅಂಗಡಿ ಶಂಕರಣ್ಣ, ಮಲ್ಲನಗೌಡ, ನರೇಂದ್ರ ಬಾಬು, ಬಸವಣ್ಣ, ಲಿಂಗಾರೆಡ್ಡಿ ಇದ್ದರು.
===